ಪೌರ ಕಾರ್ಮಿಕರು ಸುರಕ್ಷತಾ ಪರಿಕರ ಕಡ್ಡಾಯವಾಗಿ ಬಳಸಿ ಕರ್ತವ್ಯ ನಿರ್ವಹಿಸುವಂತೆ ನೋಡಿಕೊಳ್ಳಿ: ಉಡುಪಿ ಡಿಸಿ ಸ್ವರೂಪ

ಉಡುಪಿ, ಜು.14: ಪೌರ ಕಾರ್ಮಿಕರು ತಮ್ಮ ದೈನಂದಿನ ಜವಾಬ್ದಾರಿ ನಿರ್ವಹಿಸುವಾಗ ಸುರಕ್ಷತಾ ಪರಿಕರಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಬೇಕು. ಈ ಬಗ್ಗೆ ಸ್ಥಳೀಯ ಸಂಸ್ಥೆಯ ಮುಖ್ಯ ಅಧಿಕಾರಿಗಳು ವಿಶೇಷ ಮುತು ವರ್ಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ಸಫಾಯಿ ಕರ್ಮ ಚಾರಿಗಳ ಜಿಲ್ಲಾ ಜಾಗೃತ ಸಮಿತಿಯ ದ್ವಿತೀಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಪೌರ ಕಾರ್ಮಿಕರು ಉತ್ತಮ ಅರೋಗ್ಯ ಹೊಂದಿ ಸದೃಢವಾಗಿ ಕಾರ್ಯ ನಿರ್ವಹಿಸಲು ಅನುಕೂಲವಾಗಲಿ ಎಂದು ಸರಕಾರ ಪೌರ ಕಾರ್ಮಿಕರಿಗೆ ಸುರಕ್ಷತಾ ಪರಿಕರಗಳನ್ನು ನೀಡುತ್ತಿದೆ. ಇವುಗಳನ್ನು ಪೌರ ಕಾರ್ಮಿಕರು ತಮ್ಮ ದಿನನಿತ್ಯ ಕಾರ್ಯ ನಿರ್ವಹಿಸುವಾಗ ತಪ್ಪದೆ ಬಳಸಬೇಕು ಎಂದವರು ಸೂಚನೆ ನೀಡಿದರು.
ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ಲೋಡರ್ಸ್, ಕ್ಲೀನರ್ಸ್ ಹಾಗೂ ಡ್ರೈವರ್ಸ್‌ಗಳಿಗೆ ಪ್ರತಿ ತಿಂಗಳು ವೇತನವನ್ನು ವಿಳಂಬವಿಲ್ಲದೆ ಪಾವತಿಸಬೇಕು. ಇದರ ಜೊತೆಗೆ ಅವರಿಗೆ ಇಎಸ್‌ಐ ಹಾಗೂ ಪಿಎಫ್ ಮೊತ್ತ ಪಾವತಿ ಯಾಗಿರುವ ಬಗ್ಗೆ ಅಧಿಕಾರಿಗಳು ಪರಿಶೀಲಿಸುತ್ತಿರಬೇಕು ಎಂದರು.
ಪೌರಾಡಳಿತ ನಿರ್ದೇಶನಲಾಯವು ಪೌರ ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯ ಆರೋಗ್ಯ ತಪಾಸಣೆ ಮತ್ತು ವರ್ಷಕ್ಕೊಮ್ಮೆ ಮಾಸ್ಟರ್ ಹೆಲ್ತ್ ಚೆಕ್-ಅಪ್ ಮಾಡಿಸಲು ಕ್ರಮವಹಿಸಬೇಕು. ಶೇ.24.01ರ ಅನುದಾನವನ್ನು ಪೌರ ಕಾರ್ಮಿಕರಿಗಾಗಿ ಮೀಸಲಿಟ್ಟಿದ್ದು, ಸರಕಾರದ ಆದೇಶದ ಆನ್ವಯ ಅವುಗಳನ್ನು ಉಪಯೋಗಿ ಸಬೇಕು ಎಂದರು.
ಪೌರ ಕಾರ್ಮಿಕರ ಮಕ್ಕಳು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನ ಪಡೆಯಲು ಅನುಕೂಲವಾಗುವಂತೆ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಮಾನ್ಯುಯಲ್ ಸ್ಕ್ಯಾವೆಂಜೆರ್ಸ್ ಮಕ್ಕಳಿಗೆ ಶೇ.5ರಷ್ಟು ನೇರ ಪ್ರವೇಶಕ್ಕೆ ಅವಕಾಶವಿದೆ. ಇದರ ಸದುಪಯೋಗ ಆಗಬೇಕು. ಯಾರೊಬ್ಬ ಮಕ್ಕಳು ಶಾಲೆಯಿಂದ ಹೊರಗುಳಿ ಯದಂತೆ ನೋಡಿಕೊಳ್ಳಬೇಕು ಎಂದರು.
ಸಫಾಯಿ ಕರ್ಮಾಚಾರಿಗಳ ಸರ್ವಾಂಗೀಣ ಅಭಿವೃದ್ಧಿಗೆ ಅನುಕೂಲ ವಾಗುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೆ ತಂದಿರುವ ಯೋಜನೆಗಳು ಸಫಾಯಿ ಕರ್ಮಚಾರಿಗಳಿಗೆ ಸಂಪೂರ್ಣವಾಗಿ ತಲುಪುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಅನಿತಾ ಮಡ್ಲೂರು, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಶೆಟ್ಟಿ, ಪೌರಾಯುಕ್ತ ಮಹಾಂತೇಶ್ ಹಂಗರಗಿ, ಸಮಿತಿಯ ಸದಸ್ಯರಾದ ಪ್ರಶಾಂತಿ, ನಾಗರಾಜ, ಕೊಟ್ರಿಬಾಯಿ ಹಾಗೂ ಶಂಕರ, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನ ಅಧಿಕಾರಿಗಳು ಉಪಸ್ಥಿತರಿದ್ದರು.






