ಕೆಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯಿಂದ ರಕ್ತದಾನ ಶಿಬಿರ

ಕುಂದಾಪುರ, ಜು.19: ರಕ್ತದಾನ ಮಾಡಿ, ಜೀವ ಉಳಿಸಿ. ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ಮೂವರ ಪ್ರಾಣ ಉಳಿಸಬಹುದು. ರಕ್ತದಾನ ಜೀವ ಉಳಿಸುವ ಪುಣ್ಯದ ಕಾರ್ಯ. ಎಲ್ಲರ ರಕ್ತವು ಒಂದೇ. ಆರೋಗ್ಯದಿಂದ ಇರುವ ಎಲ್ಲರೂ ರಕ್ತದಾನ ಮಾಡಬಹುದು ಎಂದು ಕುಂದಾಪುರ ವಲಯದ ಪ್ರಧಾನ ಧರ್ಮಗುರು ವಂ. ಪೌಲ್ ರೇಗೋ ಹೇಳಿದ್ದಾರೆ.
ರವಿವಾರ ಇಲ್ಲಿನ ಬೋರ್ಡ್ ಹೈಸ್ಕೂಲಿನ ಲಕ್ಷ್ಮೀನರಸಿಂಹ ಕಲಾಮಂದಿರ ದಲ್ಲಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಕುಂದಾಪುರ ವಲಯ ಸಮಿತಿ ಆಶ್ರಯದಲ್ಲಿ ಆರೋಗ್ಯ ಆಯೋಗ ಕುಂದಾಪುರ ವಲಯ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜೆಸಿಐ ಕುಂದಾಪುರ ಸಿಟಿ, ಲಯನ್ಸ್ ಕ್ಲಬ್ ಹಂಗಳೂರು ಸಹಯೋಗದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕುಂದಾಪುರ ವಲಯದ ಅಧ್ಯಕ್ಷೆ ಶೈಲಾ ಲೂವಿಸ್ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಆದರ್ಶ ಹೆಬ್ಬಾರ್, ಭಾರತೀಯ ರೆಡ್ ಕ್ರಾಸ್ ಕುಂದಾಪುರ ಘಟಕದ ಸಭಾಪತಿ ಎಸ್. ಜಯಕರ ಶೆಟ್ಟಿ, ವಿನಯಾ ನರ್ಸಿಂಗ್ ಹೋಮ್ ಡಯಾಲಿಸಿಸ್ ವಿಭಾಗದ ಮುಖ್ಯಸ್ಥ ನಾಗರಾಜ್, ಹಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಹಂಸರಾಜ್ ಶೆಟ್ಟಿ, ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷ ಕಿರಣ್ ದೇವಾಡಿಗ, ವಲಯದ ಮಾಜಿ ಅಧ್ಯಕ್ಷೆ ರೇಮಿ ಫೆರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು.
ಎಸೆಸೆಲ್ಸಿ ಪರೀಕ್ಷೆಯಲ್ಲಿ ಪೂರ್ಣಾಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನಿಯಾದ ಶಂಕರನಾರಾಯಣ ಮದರ್ ಥೆರೆಸಾ ಪ್ರೌಢಶಾಲೆಯ ಪ್ರೀತಮ್ ಜಿ. ಪೂಜಾರಿ ಅವರನ್ನು ಇದೇ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.ರಕ್ತದಾನ ಶಿಬಿರದಲ್ಲಿ ಒಟ್ಟು 128 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ರಕ್ತದಾನ ಶಿಬಿರದ ಸಂಚಾಲಕಿ ಡಾ. ಸೋನಿ ಡಿಕೋಸ್ಟಾ ಸ್ವಾಗತಿಸಿ, ವಲಯದ ಕಾರ್ಯದರ್ಶಿ ಮರಿಯಾ ಡಿಸಿಲ್ವಾ ವಂದಿಸಿದರು. ಆಶಾ ಕರ್ವಾಲೋ ಕಾರ್ಯಕ್ರಮ ನಿರೂಪಿಸಿದರು.






