ಕಂಬೈನ್ಡ್ ಹಾರ್ವೆಸ್ಟರ್ ಹಬ್ ರಚನೆ: ಅರ್ಜಿ ಆಹ್ವಾನ

ಉಡುಪಿ : ಪ್ರಸಕ್ತ ಸಾಲಿನಲ್ಲಿ ಕೃಷಿ ಇಲಾಖೆಯಿಂದ ರಾಜ್ಯ ವಲಯ ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ಕಂಬೈನ್ಡ್ ಹಾರ್ವೆಸ್ಟರ್ ಹಬ್ ರಚನೆಗೆ ಆಸಕ್ತ ರೈತರಿಂದ ವೈಯಕ್ತಿಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ರೈತರು ಪಹಣಿ, ಆಧಾರ್ ಪ್ರತಿ, ಬ್ಯಾಂಕ್ ಖಾತೆಯ ವಿವರದ ಪ್ರತಿ, ನಿಗದಿತ ಭಾಷಾ ಕಾಗದದಲ್ಲಿ ಹಬ್ ಪರಬಾರೆ ಮಾಡುವುದಿಲ್ಲ ಎಂದು ಮುಚ್ಚಳಿಕೆ ಪತ್ರ ಇತ್ಯಾದಿ ಅಗತ್ಯ ದಾಖಲಾತಿಗಳೊಂದಿಗೆ ನಿಗದಿತ ನಮೂನೆ ಯಲ್ಲಿ ವಿವರ ಭರ್ತಿ ಮಾಡಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಬಹುದು.
ಈ ಯೋಜನೆಯಡಿ ಅರ್ಜಿದಾರರು ಕಂಬೈನ್ಡ್ ಹಾರ್ವೆಸ್ಟರ್ ಹಾಗೂ ಬೇಲರ್‌ಗಳನ್ನು ಕಡ್ಡಾಯವಾಗಿ ಖರೀದಿಸ ಬೇಕಾಗಿದ್ದು, ಇವುಗಳೊಂದಿಗೆ ಹಾರ್ವೆಸ್ಟರ್ ಹಬ್‌ಗೆ ಅನುಮತಿಸಲಾದ ಇತರೆ ಉಪಕರಣಗಳನ್ನು ಸ್ಥಳೀಯ ಅವಶ್ಯಕತೆಗಳಿಗನುಗುಣವಾಗಿ ಖರೀದಿಸಬಹುದು. ವೈಯಕ್ತಿಕ ಫಲಾನುಭವಿ ಗಳಿಗೆ ಶೇ. 50ರ ಸಹಾಯಧನದಲ್ಲಿ ಗರಿಷ್ಟ 40 ಲಕ್ಷ ರೂ. ಸಹಾಯಧನವನ್ನು ಪ್ರತಿ ಹಾರ್ವೆಸ್ಟರ್ ಹಬ್ ರಚನೆಗೆ ಉಪಕರಣವಾರು ನಿಗದಿಪಡಿಸಿದ ಗರಿಷ್ಟ ಸಹಾಯಧನದ ಮಿತಿಗೆ ಒಳಪಟ್ಟು ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ರೂಪದಲ್ಲಿ ಒದಗಿಸಲಾಗುವುದು.
ಅರ್ಜಿ ಸಲ್ಲಿಸಲು ಆಗಸ್ಟ್ 19 ಕೊನೆಯ ದಿನ. ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.






