ಕುಂದಾಪುರ: ಮತ್ತೆರಡು ಕಾಡು ಹಂದಿಗಳ ಶವ ಪತ್ತೆ

ಕುಂದಾಪುರ, ಜು.21: ತಾವೂಕಿನಲ್ಲಿ ಕಾಡುಹಂದಿಗಳ ಸರಣಿ ಸಾವು ಮತ್ತೆ ಮುಂದುವರಿದಿದ್ದು, ಸೋಮವಾರ ಹಕ್ಲಾಡಿ ಗ್ರಾಪಂ ವ್ಯಾಪ್ತಿಯ ಕುಂದಬಾರಂದಾಡಿಯ ಕೊಳೂರು ಹಾಗೂ ಹೇರೂರಿನ ರಾಗಿಹಕ್ಲು ಎಂಬಲ್ಲಿ ಎರಡು ಕಾಡು ಹಂದಿಗಳ ಮೃತದೇಹ ಪತ್ತೆಯಾಗಿದೆ.
ಕುಂದಬಾರಂದಾಡಿಯಲ್ಲಿ ಹೆಮ್ಮಾಡಿ ಪಶು ವೈದ್ಯಕೀಯ ಆಸ್ಪತ್ರೆಯ ಡಾ. ನಾಗರಾಜ್ ಅವರು ಅರಣ್ಯ ಇಲಾಖೆ ಸಿಬ್ಬಂದಿ ಸಹಕಾರದೊಂದಿಗೆ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಇನ್ನು ಹೇರೂರಿನ ರಾಗಿ ಹಕ್ಲು ಎಂಬಲ್ಲಿ ಸಿಕ್ಕ ಕಾಡು ಹಂದಿಯ ಮರಣೋತ್ತರ ಪರೀಕ್ಷೆಯನ್ನು ಅಲ್ಲಿನ ಪಶು ವೈದ್ಯಾಧಿಕಾರಿ ಡಾ. ಅರುಣ್ ಕುಮಾರ್ ವೈ.ಕೆ. ಅವರು ಮಾಡಿದ್ದು, ಅದರ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ, ವರದಿಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ.
ಇದಕ್ಕೂ ಮೊದಲು 2 ಕಾಡು ಹಂದಿಗಳು ಹಾಗೂ 1 ಸಾಕು ಹಂದಿಗಳ ಶವದ ಮರಣೋತ್ತರ ಪರೀಕ್ಷೆ ನಡೆಸಿ, ಸ್ಯಾಂಪಲ್‌ಗಳನ್ನು ಸಂಬಂಧಪಟ್ಟ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರ ವರದಿ ಇನ್ನೂ ಕೂಡ ಬಂದಿಲ್ಲ. ಆ ವರದಿ ಬಂದ ಬಳಿಕವಷ್ಟೇ ಕಾಡು ಹಂದಿಗಳು ಹಾಗೂ ಸಾಕು ಹಂದಿಗಳ ಸಾವಿಗೆ ನಿಖರ ಕಾರಣ ತಿಳಿಯಬಹುದು ಎಂದು ಪಶುವೈದ್ಯರು ತಿಳಿಸಿದ್ದಾರೆ.




