ಉಡುಪಿ: ಜಿಲ್ಲೆಯಾದ್ಯಂತ ಸಾಧಾರಣ ಮಳೆ; ಹಲವು ಮನೆಗಳಿಗೆ ಹಾನಿ

ಉಡುಪಿ, ಜು.24: ಉಡುಪಿ ಜಿಲ್ಲೆಯಾದ್ಯಂತ ನಿರೀಕ್ಷಿತ ಮಟ್ಟಕ್ಕೇರದೇ ಆಗಾಗ ಬಿಸಿಲು ಕಾಣಿಸಿಕೊಂಡು ಸಾಧಾ ರಣ ಪ್ರಮಾಣದಲ್ಲಿ ಮುಂಗಾರು ಮಳೆ ಸುರಿಯುತ್ತಿದೆ. ಕೆಲವೊಮ್ಮೆ ಬೀಸುವ ಗಾಳಿ-ಮಳೆಗೆ ಜಿಲ್ಲೆಯ ಅಲ್ಲಲ್ಲಿ ಕೆಲವು ಮನೆಗಳಿಗೆ ಹಾನಿಯಾದ ವರದಿಗಳು ಬಂದಿವೆ.
ಕಾಪು ತಾಲೂಕಿನ 92 ಹೇರೂರು ಗ್ರಾಮದಲ್ಲಿ ಶಾಂತ ಪ್ರಭು ಎಂಬವರ ವಾಸದ ಮನೆ ಮೇಲೆ ಮರ ಬಿದ್ದು ಭಾಗಶ: ಹಾನಿಯಾಗಿದ್ದು 60,000ರೂ. ನಷ್ಟ ಉಂಟಾಗಿದೆ. ಕುಂದಾಪುರ ತಾಲೂಕಿನ ಹಂಗಳೂರಿನ ಜಗದೀಶ ಪೂಜಾರಿ ಎಂಬವರ ಮನೆ ಮಳೆಯಿಂದ ಹಾನಿಗೊಳಗಾಗಿದ್ದು 50,000ರೂ. ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಕಾಪು ತಾಲೂಕು ಮಲ್ಲಾರು ಗ್ರಾಮದ ಹರೀಶ್ ಸೇರ್ವೆಗಾರ್ ಇವರ ಮನೆ ಮೇಲೆ ಮರ ಬಿದ್ದು ಭಾಗಶ: ಹಾನಿಯಾ ಗಿದ್ದು, 40,000 ರೂ.ನಷ್ಟ ವಾಗಿರುವುದಾಗಿ ಅಂದಾಜಿಸಲಾಗಿದೆ. ಪಡು ಗ್ರಾಮದ ಪುಷ್ಪ ನಾಯ್ಕ್ ಅವರ ಮನೆ ಮೇಲೆ ಮರ ಬಿದ್ದು 10ಸಾವಿರದಷ್ಟು ನಷ್ಟವಾಗಿದ್ದರೆ, ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಅಂಗಾರ ಎಂಬವರ ಮನೆಗೆ ಸಂಪೂರ್ಣ ಹಾನಿಯಾಗಿದ್ದು ಸುಮಾರು ಒಂದು ಲಕ್ಷ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.
ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 48 ಮಿ.ಮೀ.ಮಳೆ ಬಿದ್ದ ವರದಿ ಬಂದಿದೆ. ಅತೀ ಹೆಚ್ಚಿನ ಮಳೆ ಬಿದ್ದಿರುವುದು ಹೆಬ್ರಿ ತಾಲೂಕಿನಲ್ಲಿ. ಅಲ್ಲಿ 96.0 ಮಿ.ಮೀ. ಮಳೆ ಸುರಿದಿದೆ. ಇನ್ನುಳಿದಂತೆ ಬ್ರಹ್ಮಾವರದಲ್ಲಿ 51.6, ಕುಂದಾಪುರದಲ್ಲಿ 47.3, ಕಾರ್ಕಳದಲ್ಲಿ 38.7, ಬೈಂದೂರಿನಲ್ಲಿ 37.6, ಉಡುಪಿಯಲ್ಲಿ 32.5 ಹಾಗೂ ಕಾಪುವಿನಲ್ಲಿ 26.5ಮಿ.ಮೀ. ಮಳೆಯಾದ ವರದಿ ಬಂದಿದೆ.
ಭಾರೀ ಮಳೆಯ ಎಚ್ಚರಿಕೆ: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಗಂಟೆಗೆ 30ರಿಂದ 40ಕಿ.ಮೀ. ವೇಗದ ಗಾಳಿಯೊಂದಿಗೆ ಬಾರೀ ಮಳೆ ಸುರಿಯುವ ಸಾಧ್ಯತೆ ಕುರಿತಂತೆ ಹವಾಮಾನ ಇಲಾಖೆ ಎಚ್ಚರಿಕೆಯನ್ನು ನೀಡಿದೆ.






