ನೇಜಿ ನೆಟ್ಟು ಸಂಭ್ರಮಿಸಿದ ನಿಟ್ಟೂರು ಪ್ರೌಢಶಾಲೆ ಮಕ್ಕಳು

ಉಡುಪಿ, ಜು.24: ನಿಟ್ಟೂರು ಪ್ರೌಢಶಾಲೆಯ 10ನೇ ತರಗತಿಯ 54 ಮಂದಿ ವಿದ್ಯಾರ್ಥಿಗಳು ಕಕ್ಕುಂಜೆಯ ಚಂದ್ರ ಶೇಖರ್ ನಾಯ್ಕ್ ಅವರ ಎರಡು ಗದ್ದೆಗಳಲ್ಲಿ ನೇಜಿ ನೆಟ್ಟು ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಂಡು ಪ್ರಕೃತಿ ನಡುವೆ ಸಂಭ್ರಮಿಸಿದರು.
ಕಳೆದ 11 ವರ್ಷಗಳಿಂದ, ಮುಖ್ಯಶಿಕ್ಷಕರಾಗಿದ್ದ ಮುರಲಿ ಕಡೆಕಾರ್ ಅವರ ವಿಶೇಷ ಆಸಕ್ತಿಯಿಂದ ವಿದ್ಯಾರ್ಥಿಗಳಿಗೆ ವಿವಿಧ ಕೃಷಿ ಚಟುವಟಿಕೆಗಳ ಪ್ರತ್ಯಕ್ಷ ಅನುಭವಕ್ಕಾಗಿ ಇದನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ ಕೂಡ ವಿದ್ಯಾರ್ಥಿಗಳು ಸುರಿಯುವ ಮಳೆಯೊಂದಿಗೆ ಕೆಸರು ತುಂಬಿದ ಗದ್ದೆಗಿಳಿದು ನೇಜಿ ನೆಟ್ಟು ವಿಶೇಷ ಅನುಭವ ಪಡೆದರು.
ಈ ಬಾರಿ ಹೊರ ಜಿಲ್ಲೆಯ ವಿದ್ಯಾರ್ಥಿಗಳೇ ಅಧಿಕವಿದ್ದರು. ಅದರಲ್ಲೂ ಉತ್ತರ ಕರ್ನಾಟಕದ ಮಂದಿ. ಹೆಚ್ಚಿನ ವಿದ್ಯಾರ್ಥಿ ಗಳು ಪ್ರಥಮ ಬಾರಿಗೆ ಗದ್ದೆಗಿಳಿದು ನಾಟಿ ಮಾಡುವ ಮೂಲಕ ಅನ್ನದಾತನ ಕಠಿಣ ಪರಿಶ್ರಮದ ಅನುಭವದೊಂದಿಗೆ ಕೃಷಿ ಜೀವನಶೈಲಿ, ರೈತನ ಬದುಕಿನ ಬವಣೆಯನ್ನು ಅರಿತುಕೊಂಡರು.
ವಿದ್ಯಾರ್ಥಿಗಳೊಂದಿಗೆ ಮುಖ್ಯಶಿಕ್ಷಕರಾದ ರಾಮದಾಸ್ ಹಾಗೂ ಶಿಕ್ಷಕರಾದ ದೇವದಾಸ್ ಶೆಟ್ಟಿ, ನಮಿತಾಶ್ರೀ, ಸೀಮಾ, ಚಿನ್ನಮ್ಮ, ಕವಿತಾ, ಲಕ್ಷ್ಮೀಸರಸ್ವತಿ ಪಾಲ್ಗೊಂಡರು.




