ಮಳೆ| ಬೋಳ ಗ್ರಾಮದಲ್ಲಿ ಮನೆ ಮೇಲೆ ಮರ ಬಿದ್ದು ಓರ್ವನಿಗೆ ಗಾಯ

ಉಡುಪಿ, ಜು.25: ಕಾರ್ಕಳ ತಾಲೂಕಿನ ಬೋಳ ಗ್ರಾಮದ ಜನಾರ್ದನ ಆಚಾರ್ಯ ಎಂಬವರ ವಾಸ್ತವ್ಯದ ಮನೆ ಮೇಲೆ ಇಂದು ಬೆಳಗ್ಗೆ ಮರ ಬಿದ್ದು, ಜನಾರ್ದನ ಆಚಾರ್ಯ ಅವರ ಕುತ್ತಿಗೆ ಹಾಗೂ ಕಾಲಿನ ಭಾಗಕ್ಕೆ ಗಾಯವಾಗಿದೆ. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕಾರ್ಕಳದ ತಹಶೀಲ್ದಾರರು ತಿಳಿಸಿದ್ದಾರೆ.
ಮನೆ ಮೇಲೆ ಭಾರಿ ಗಾತ್ರದ ಮರ ಬಿದ್ದ ಪರಿಣಾಮ ಮನೆಗೆ ದೊಡ್ಡ ಪ್ರಮಾಣದ ಹಾನಿ ಸಂಭವಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ ಘಟನೆಯಿಂದ ಸುಮಾರು ಒಂದು ಲಕ್ಷ ರೂ.ನಷ್ಟು ನಷ್ಟದ ಅಂದಾಜು ಮಾಡಲಾಗಿದೆ.
ಇಂದು ಆಗಾಗ ಬಿಸಿಲು ಕಣ್ಣುಮುಚ್ಚಾಲೆಯಾಡುತಿದ್ದರೂ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿದಿದೆ. ಕೆಲವೊಂದು ಕಡೆಗಳಲ್ಲಿ ಮಳೆ ಧಾರಾಕಾರವಾಗಿ ಸುರಿದಿದ್ದು, ದಿನದಲ್ಲಿ ಅತ್ಯಧಿಕ ಪ್ರಮಾಣದ ಮಳೆಯ ನಿರೀಕ್ಷೆ ಹುಟ್ಟಿಸಿದೆ.
ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸಹ ಭಾರೀ ಮಳೆಯಾಗುತ್ತಿರುವ ಕಾರಣ ಹಾಗೂ ಆಗಾಗ ಮಳೆಯೊಂದಿಗೆ ಗಾಳಿಯೂ ಬೀಸುತ್ತಿರುವ ಕಾರಣ, ಜಿಲ್ಲೆಯ ಹೆಚ್ಚಿನ ನದಿಗಳು ಇದೇ ಮೊದಲ ಬಾರಿ ತುಂಬಿ ಹರಿಯತೊಡಗಿವೆ. ಇದೇ ಪ್ರಮಾಣ ದಲ್ಲಿ ಮಳೆ, ಗಾಳಿಯೊಂದಿಗೆ ರಾತ್ರಿಯಿಡೀ ಸುರಿದರೆ ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ತಗ್ಗುಪ್ರದೇಶಗಳಲ್ಲಿ ನೆರೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 43.7ಮಿ.ಮೀ.ಮಳೆ ಬಿದ್ದಿದೆ. ಬೈಂದೂರಿನಲ್ಲಿ ಅತ್ಯಧಿಕ 67.8ಮಿ.ಮೀ. ಮಳೆಯಾದರೆ, ಕುಂದಾಪುರದಲ್ಲಿ 50.1, ಹೆಬ್ರಿಯಲ್ಲಿ 49.3, ಕಾರ್ಕಳದಲ್ಲಿ 36.7, ಉಡುಪಿಯಲ್ಲಿ 28.6, ಬ್ರಹ್ಮಾವರದಲ್ಲಿ 26.6 ಹಾಗೂ ಕಾಪುವಲ್ಲಿ 18.7ಮಿ.ಮೀ.ಮಳೆ ಬಿದ್ದ ವರದಿ ಬಂದಿದೆ.






