‘ಡ್ರಗ್ಸ್ ಬೇಡ: ಬ್ರೋ' ಮಾದಕ ವಸ್ತುಗಳ ಜಾಗೃತಿ ಕಾರ್ಯಕ್ರಮ

ಕುಂದಾಪುರ, ಜು.25: ಇತ್ತೀಚೆಗೆ ವಸ್ತುಸ್ಥಿತಿ ಆತಂಕಕಾರಿಯಾಗಿದೆ. ಹೆಚ್ಚಿನ ಯುವಕರು ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಅವರು ತಮ್ಮ ಶೈಕ್ಷಣಿಕ ಹಿನ್ನೆಡೆ, ಮಾನಸಿಕ, ದೈಹಿಕ ಆರೋಗ್ಯವನ್ನು ಕಳೆದು ಕೊಂಡು ತಮ್ಮತನ ಕಳೆದುಕೊಳ್ಳುತ್ತಿದ್ದಾರೆ. ಪರಿಣಾಮವಾಗಿ ಕುಟುಂಬ, ಸಮಾಜ ಊರು ಮತ್ತು ದೇಶಕ್ಕೆ ಹೊರೆಯಾಗುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್, ಕುಂದಾಪುರ ಪೊಲೀಸ್ ಠಾಣೆ ಇವರ ಆಶ್ರಯದಲ್ಲಿ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಸಹಯೋಗದಲ್ಲಿ ಭಂಡಾರ್ಕರ್ಸ್ ಕಾಲೇಜಿನಲ್ಲಿ ಶುಕ್ರವಾರ ನಡೆದ ‘ಡ್ರಗ್ಸ್ ಬೇಡ: ಬ್ರೋ' ಎಂಬ ಮಾದಕ ವಸ್ತುಗಳ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಾದಕದ್ರವ್ಯಗಳ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಸಮುದಾಯದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಮಾದಕದ್ರವ್ಯ ಸೇವನೆಯ ವ್ಯಸನಿಗಳ ಸಂಖ್ಯೆ ಸಹ ವಿಪರೀತಕ್ಕೆ ತಲುಪಿದೆ. ಇದು ಸಮಾಜದ ಮತ್ತು ದೇಶದ ಬೆಳವಣಿಗೆಗೆ ಮಾರಕವಾಗಿದೆ. ಹಾಗಾಗಿ ಮಾದಕ ದ್ರವ್ಯಗಳ ಸೇವನೆಯ ವಿರುದ್ದ ಯುವಕರಲ್ಲಿ ಜಾಗೃತಿ ಮೂಡಿಸ ಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ಸರ್ಕಾರ, ಸಮಾಜ, ಸಂಘ ಸಂಸ್ಥೆಗಳು, ಇಲಾಖೆಗಳು, ವಿದ್ಯಾರ್ಥಿಗಳು ಒಟ್ಟಾಗಿ ಜಂಟಿಯಾಗಿ ವ್ಯಸನದ ಕೆಟ್ಟ ಪರಿಣಾಮದ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ದಲ್ಲಿ ಕೈಜೋಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಇಂದಿನ ಯುವಜನತೆ ಭವ್ಯ ಭಾರತದ ರುವಾರಿಗಳು. 2047ರ ವಿಕಸಿತ ಭಾರತವನ್ನು ನೋಡಬೇಕಾದರೆ ಮೊದಲು ಸತ್ಪ್ರಜೆ ಯಾಗಬೇಕು. ಮಾದಕದ್ರವ್ಯ ಸೇವನೆಯಿಂದ ಮೊದಲು ದೂರವಿರ ಬೇಕು. ಪೋಲೀಸ್ ಇಲಾಖೆ ಮತ್ತು ವಿವಿಧ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅತ್ಯುತ್ತಮ ಸಮಾಜ ನಿರ್ಮಾಣ ಮತ್ತು ಮಾದಕದ್ರವ್ಯ ಸೇವನೆಯ ವಿರುದ್ದ ಯುವಕರಲ್ಲಿ ಜಾಗೃತಿ ಮೂಡಿಸುವ ಈ ಕಾರ್ಯಕ್ರಮ ಅರ್ಥಪೂರ್ಣ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಮನೋವೈದ್ಯ ಡಾ.ಪ್ರಕಾಶ್ ತೋಳಾರ್ ಮತ್ತು ಕುಂದಾಪುರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ನಂಜಾನಾಯ್ಕ್ ಎನ್. ವಿಶೇಷ ಉಪನ್ಯಾಸ ಮತ್ತು ಮಾಹಿತಿ ನೀಡಿದರು. ಉಪನಿರೀಕ್ಷಕಿ ಪುಷ್ಪಾ ಪ್ರತಿಜ್ಞಾ ವಿಧಿ ಬೋಧಿಸಿದರು. ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ, ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರಾಚಾರಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ.ಸರೋಜಾ ಎಂ. ಉಪಸ್ಥಿತರಿದ್ದರು.
ಕುಂದಾಪುರ ಪೊಲೀಸ್ ಠಾಣೆಯ ನಿರೀಕ್ಷಕ ಜಯರಾಮ ಡಿ.ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾರ ಪೊಲೀಸ್ ಠಾಣೆಯ ಉಪನಿರೀಕ್ಷಕ ಅನೂಪ್ ನಾಯ್ಕ್ ವಂದಿಸಿದರು. ಶಂಕರನಾರಾಯಣ ಪೋಲಿಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಮಧುಸೂದನ ಕಾರ್ಯಕ್ರಮ ನಿರೂಪಿಸಿದರು.






