ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆರು ಮಂದಿಯ ಹೆಸರು ಶಿಫಾರಸ್ಸು: ಹಿಮ್ಮತ್‌ಸಿಂಗ್

ಉಡುಪಿ: ಎಐಸಿಸಿ ಸಭೆಯಲ್ಲಿ ಇತ್ತೀಚೆಗೆ ತೆಗೆದುಕೊಂಡ ನಿರ್ಧಾರದಂತೆ ದೇಶವ್ಯಾಪ್ತಿ ಪಕ್ಷ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಹೊಸ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇದೀಗ ಆರಂಭಗೊಂಡಿದ್ದು, ಉಡುಪಿ ಜಿಲ್ಲೆಯ ಪಕ್ಷದ ಪ್ರಮುಖರ ಮೂಲಕ ಅಭಿಪ್ರಾಯವನ್ನು ಸಂಗ್ರಹಿಸಿ ಆರು ಮಂದಿಯ ಹೆಸರನ್ನು ಆಯ್ಕೆಗಾಗಿ ಎಐಸಿಸಿಗೆ ಕಳುಹಿಸಿ ಕೊಡಲಾಗುತ್ತದೆ ಎಂದು ಉಡುಪಿ ಜಿಲ್ಲೆಗೆ ಎಐಸಿಸಿ ವೀಕ್ಷಕ ಹಿಮ್ಮತ್‌ಸಿಂಗ್ ಪಟೇಲ್ ಹೇಳಿದ್ದಾರೆ.
ಪಕ್ಷದ ಸಂಘಟನಾ ಸೃಜನಾ ಅಭಿಯಾನ (ಎಸ್‌ಎಸ್‌ಎ)ದ ಅಂಗವಾಗಿ ಜಿಲ್ಲೆಗೆ ಆಗಮಿಸಿ ಬ್ರಹ್ಮಗಿರಿಯ ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಜಿಲ್ಲಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಕುರಿತು ವಿವರಗಳನ್ನು ನೀಡಿದರು.
ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಕೆಲಸವಾಗುತ್ತಿದೆ. ಯುವ ನಾಯಕತ್ವದ ಮೂಲಕ ಪಕ್ಷಕ್ಕೆ ಹೊಸ ರೂಪ ನೀಡುವ ಬಗ್ಗೆ ಚಿಂತಿಸಲಾಗಿದೆ. ರಾಹುಲ್ ಗಾಂಧಿ ನಾಯಕತ್ವದಲ್ಲಿ ನಡೆದ ಭಾರತ್ ಜೋಡೊ ಯಾತ್ರೆಗೆ ಸಿಕ್ಕಿದ ಅಭೂತಪೂರ್ವ ಬೆಂಬಲದಿಂದ ಸ್ಪೂರ್ತಿಗೊಂಡು ಜಿಲ್ಲಾ ಮಟ್ಟದಿಂದಲೇ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸುವ ಬಗ್ಗೆ ಚಿಂತಿಸಿದ್ದಾರೆ.
ಈ ಸಲುವಾಗಿ ಸಂಘಟನಾ ಸೃಜನಾ ಅಭಿಯಾನವನ್ನು ಆಯೋಜಿಸಲಾಗಿದೆ. ಜಿಲ್ಲೆಯ ಚುಕ್ಕಾಣಿಯನ್ನು ಯಾರಿಗೆ ನೀಡಬೇಕೆನ್ನುವ ಬಗ್ಗೆ ಸರ್ವೇ ನಡೆಸಲು ಜಿಲ್ಲೆಯ ಎಲ್ಲಾ ಬ್ಲಾಕ್ ಮಟ್ಟದಲ್ಲಿ ಸಭೆ ನಡೆಸಿ ಅಲ್ಲಿನ ಕಾರ್ಯಕರ್ತರ, ನಾಯಕರ ಅಭಿಪ್ರಾಯ ಪಡೆಯಲಾಗುವುದು. ಕೊನೆಗೆ ಜಿಲ್ಲೆಯಿಂದ ಅರ್ಹರಾದ ಆರು ಮಂದಿಯ ಹೆಸರನ್ನು ಹೈಕಮಾಂಡ್‌ಗೆ ಶಿಫಾರಸ್ಸು ಮಾಡಲಾಗುತ್ತದೆ ಎಂದು ವಿವರಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೈತನ್ಯ ನೀಡಿ ಪಕ್ಷವನ್ನು ತಳ ಮಟ್ಟದಿಂದ ಕಟ್ಟುವ ಉದ್ದೇಶದಿಂದ ಹೊಸ ನಾಯಕರ ಆಯ್ಕೆ ಮಾಡಲಾಗುತ್ತಿದೆ. ಈ ಬಗ್ಗೆ ಜಿಲ್ಲೆಯ ಮಾಜಿ ಶಾಸಕರು, ಸಚಿವರು, ಸಂಸದರು, ಚುನಾಯಿತ ಜನಪ್ರತಿನಿಧಿ, ಪಕ್ಷದ ಪ್ರಮುಖರು ಹಾಗೂ ಅಭ್ಯರ್ಥಿಗಳ ಅಭಿಪ್ರಾಯವನ್ನು ಕ್ರೋಢಿಕರಿಸಲಾಗುತ್ತದೆ. ಈ ಮೂಲಕ ಜಿಲ್ಲೆಗೆ ಬೇಕಾದ ನಾಯಕರನ್ನು ಜನರೇ ಆಯ್ಕೆ ಮಾಡುವ ಇರಾದೆಯನ್ನು ಪಕ್ಷ ಹೊಂದಿದೆ. ಈ ಪ್ರಕ್ರಿಯೆ ಚುನಾವಣೆಗೆ ಸಂಬಂಧಿತ ವಿಚಾರವಲ್ಲ ಎಂದರು.
ತಿಂಗಳೊಳಗೆ ಜಿಲ್ಲಾಧ್ಯಕ್ಷರ ಆಯ್ಕೆ: ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರ, ಬ್ಲಾಕ್ ಮಟ್ಟ ಹಾಗೂ ಜನಪ್ರತಿನಿಧಿಗಳನ್ನು ಭೇಟಿಯಾಗಿ ಅಭಿಪ್ರಾಯವನ್ನು ಸಂಗ್ರಹಿಸುತ್ತೇವೆ. ಒಂದು ವಾರ ಜಿಲ್ಲೆಯಲ್ಲಿದ್ದು, ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ 6 ಮಂದಿಯ ಪಟ್ಟಿಯನ್ನು ಅಂತಿಮಗೊಳಿಸುತ್ತೇವೆ. ಈ ಪಟ್ಟಿಯಲ್ಲಿ ಎಸ್ಸಿ, ಎಸ್ಟಿ, ಒಬಿಸಿ, ಮಹಿಳೆಯರು ಸೇರಿದಂತೆ ಸಾಮಾಜಿಕ ನ್ಯಾಯಕ್ಕೆ ಆದ್ಯತೆಯನ್ನು ಕೊಡಲಾಗುತ್ತದೆ. ಹೈಕಮಾಂಡ್ ಈ ಪಟ್ಟಿಯನ್ನು ಪರಿಶೀಲಿಸಿ ಅಭ್ಯರ್ಥಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ಆಗಸ್ಟ್ ಕೊನೆಯ ವಾರದಲ್ಲಿ ಜಿಲ್ಲಾಧ್ಯಕ್ಷರ ಆಯ್ಕೆಯನ್ನು ಅಂತಿಮಗೊಳಿಸಿ ಪಟ್ಟಿ ಬಿಡುಗಡೆಗೊಳಿಸಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ತಳಮಟ್ಟದಿಂದ ಪಕ್ಷ ಸಂಘಟಿಸಿ ಇನ್ನಷ್ಟು ಗಲಿಷ್ಠಗೊಳಿ ಸುವ ಉದ್ದೇಶದಿಂದ ಹಿಮ್ಮತ್ ಸಿಂಗ್ ಅವರು ಆಗಮಿಸಿದ್ದು, ಜು.30ರವರಗೆ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರ, 10 ಬ್ಲಾಕ್‌ಗಳಿಗೆ ಭೇಟಿ ನೀಡಲಿದ್ದಾರೆ. ನಾಯಕರು, ಅಭ್ಯರ್ಥಿಗಳು, ರಾಜಕೀಯ ನೇತಾರರ ಅಭಿಪ್ರಾಯವನ್ನು ಸಂಗ್ರ ಹಿಸಿ ಹೈಕಮಾಂಡ್‌ಗೆ ಕಳುಹಿಸಲಾಗುತ್ತದೆ. ಪಕ್ಷ ಸಂಘಟನೆಗೆ ಆದ್ಯತೆ ನೀಡುವ ಹೊಸ ನಾಯಕತ್ವ ವನ್ನು ಉತ್ತೇಜಿಸುವ ಉದ್ದೇಶ ಹೊಂದಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಅಭಿಯಾನದ ಉಸ್ತುವಾರಿ ಶಾಲೆಟ್ ಪಿಂಟೋ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಮುಖಂಡರಾದ ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಹರೀಶ್ ಕಿಣಿ ಅಲೆವೂರು, ಜ್ಯೋತಿ ಹೆಬ್ಬಾರಂ, ಕೃಷ್ಣ ಶೆಟ್ಟಿ ಬಜಗೋಳಿ, ವಿಶ್ವಾಸ್ ಅಮೀನ್, ಅಬ್ದುಲ್ ಅಝೀಝ್, ನವೀನ್ಚಂದ್ರ ಶೆಟ್ಟಿ, ರೋಶನ್ ಶೆಟ್ಟಿ, ಸೌರಭ್ ಬಲ್ಲಾಳ್, ಸದಾನಂದ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.






