ಉಡುಪಿ ಕಥೊಲಿಕ್ ಸಭಾದಿಂದ ಪ್ರತಿಭಾ ಪುರಸ್ಕಾರ

ಉಡುಪಿ, ಜು.26: ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದು ಎಷ್ಟೇ ಉನ್ನತ ಹುದ್ದೆಗೆ ಏರಿದರೂ ತಾವು ಹುಟ್ಟಿದ ಊರು ಮತ್ತು ಹೆತ್ತವರನ್ನು ಎಂದಿಗೂ ಮರೆಯಬಾರದು ಎಂದು ಉಡುಪಿ ಕಥೊಲಿಕ್ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಅತಿ ವಂ.ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಕಿವಿಮಾತು ಹೇಳಿದ್ದಾರೆ.
ರವಿವಾರ ಕಕ್ಕುಂಜೆ ಅನುಗ್ರಹ ಪಾಲನ ಕೇಂದ್ರದಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶ ಹಾಗೂ ಜಾನ್ ಡಿಸಿಲ್ವಾ ಫೌಂಡೇಶನ್ ಮುಂಬೈ ಇವರ ಜಂಟಿ ಆಶ್ರಯದಲ್ಲಿ ಆಯೋಜಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮಕ್ಕಳ ಶೈಕ್ಷಣಿಕ ಭವಿಷ್ಯ ಉತ್ತಮಗೊಳ್ಳುವಲ್ಲಿ ಹೆತ್ತವರು ಮತ್ತು ಶಿಕ್ಷಕರ ಪಾತ್ರ ಮಹತ್ವದ್ದು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇರುವ ಸೌಲಭ್ಯ ಗಳನ್ನು ಉಪಯೋಗಿಸಿಕೊಂಡು ಉತ್ತಮ ಅಂಕಗಳನ್ನು ಪಡೆಯಬೇಕು. ಇಂದಿನ ಪೈಪೋಟಿ ಯುಗದಲ್ಲಿ ಉನ್ನತ ಸ್ಥಾನದಲ್ಲಿ ಉತ್ತೀರ್ಣರಾದರೆ ಮಾತ್ರ ಮುಂದಿನ ವ್ಯಾಸಂಗಕ್ಕೆ ಅನುಕೂಲವಾಗುತ್ತದೆ ಎಂದವರು ಹೇಳಿದರು.
ಹುಟ್ಟಿದ ಊರು ನಮ್ಮ ಅಸ್ತಿತ್ವದ ಬೇರು. ಬೆಳೆದ ಮೇಲೆ ಆ ಊರಿನ ಪ್ರಗತಿಗೆ ಕೈಲಾದಷ್ಟು ಕೊಡುಗೆ ನೀಡುವುದು ನಮ್ಮ ಜವಾಬ್ದಾರಿ. ಯಶಸ್ಸಿನ ಜೊತೆಗೆ ಮಾನವೀಯ ಮೌಲ್ಯಗಳು ಮತ್ತು ಕೃತಜ್ಞತಾ ಭಾವನೆ ಇದ್ದಾಗ ಮಾತ್ರ ಆ ಶಿಕ್ಷಣಕ್ಕೆ ನಿಜವಾದ ಸಾರ್ಥಕತೆ ಸಿಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಡಾ. ಜಸಿಂತಾ ಡಿಸೋಜಾ ಮಾತನಾಡಿ, ಮಕ್ಕಳಿಗೆ ತಮ್ಮ ಭವಿಷ್ಯದ ಕ್ಷೇತ್ರದ ಆಯ್ಕೆಗೆ ಹೆತ್ತವರು ಮುಕ್ತ ಅವಕಾಶ ನೀಡಬೇಕು. ಅವರಲ್ಲಿ ಒತ್ತಡ ಹೇರದೆ ಅವರ ಅಪೇಕ್ಷೆಯ ವಿಷಯಕ್ಕೆ ಅವಕಾಶ ನೀಡಿದಾಗ ಉತ್ತಮ ಭವಿಷ್ಯ ರೂಪಿಸಿ ಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಫೌಂಡೇಶನ್‌ನ ಮುಖ್ಯಸ್ಥರಾದ ಜೋನ್ ಡಿಸಿಲ್ವಾ ಮಾತನಾಡಿ ಇಂದಿನ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನ ಹರಿಸಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಐವರು, ಪಿಎಚ್‌ಡಿ ಪದವಿ ಪಡೆದ ಏಳು ಮಂದಿ ಹಾಗೂ ಧರ್ಮಪ್ರಾಂತದ 52 ಚರ್ಚುಗಳಿಂದ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷರಾದ ಮೆಲ್ವಿನ್ ಆರಾನ್ಹಾ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ಲಾಡಿಸ್ ಡಿಸಿಲ್ವಾ, ನಿಕಟಪೂರ್ವ ಅಧ್ಯಕ್ಷ ರೊನಾಲ್ಡ್ ಆಲ್ಮೇಡಾ, ಕೋಶಾಧಿಕಾರಿ ಉರ್ಬಾನ್ ಲೂವಿಸ್, ಮಾಜಿ ಅಧ್ಯಕ್ಷ ವಾಲ್ಟರ್ ಸಿರಿಲ್ ಪಿಂಟೊ, ವಲೇರಿಯನ್ ಫೆರ್ನಾಂಡಿಸ್, ಆಲ್ವಿನ್ ಕ್ವಾಡ್ರಸ್, ಸಂತೋಷ್ ಕರ್ನೆಲಿಯೋ ಪದಾಧಿಕಾರಿಗಳಾದ ಲೂಯಿಸ್ ಡಿಸೋಜಾ, ಸೋನು ಸಿಕ್ವೇರಾ, ತಿಯೋರ್ದ ಮೆಂಡೊನ್ಸಾ ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕರಾದ ಡಾ.ಜೆರಾಲ್ಡ್ ಪಿಂಟೊ ಸ್ವಾಗತಿಸಿ, ಕಾರ್ಯದರ್ಶಿ ಜುಲಿಯೇಟ್ ಡಿಸೋಜಾ ವಂದಿಸಿದರು. ಅಲನಿ ದಾಂತಿ ಕಾರ್ಯಕ್ರಮ ನಿರೂಪಿಸಿದರು.






