ನಾಯಕತ್ವ ಗುಣ, ಹೊಣೆಗಾರಿಕೆಗೆ ಭಾರತ್ ಜೋಡೋ ಯುವಸಂಘ ಸ್ಥಾಪನೆ: ಸಿಇಒ ಪ್ರತೀಕ್ ಬಾಯಲ್

ಉಡುಪಿ, ಜು.28: ಯುವಜನರಲ್ಲಿ ನಾಯಕತ್ವ ಗುಣ, ಸಾಮಾಜಿಕ ಹೊಣೆಗಾರಿಕೆ, ಸಾಮರಸ್ಯ, ಕ್ರೀಡಾ ಮನೋ ಭಾವ ಹಾಗೂ ಸಮುದಾಯ ಸೇವೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯ ಸರಕಾರದ ಮಾರ್ಗದರ್ಶನದಲ್ಲಿ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲಾ ಗುತ್ತಿದೆ ಎಂದು ಉಡುಪಿ ಜಿಲ್ಲಾಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಹೇಳಿದ್ದಾರೆ.
ಭಾರತ್ ಜೋಡೊ ಯುವ ಸಂಘಗಳ ಸ್ಥಾಪನೆಗೆ ಪಾಲಿಸಬೇಕಾದ ಮಾರ್ಗಸೂಚಿಗಳ ಕುರಿತು ಮಾಹಿತಿ ನೀಡಲು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಕರೆಯಲಾದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಗ್ಯಾರಂಟಿ ಸಮಿತಿಗಳ ಅಧ್ಯಕ್ಷರು, ಜಿಲ್ಲಾಮಟ್ಟದ ಅಧಿಕಾರಿಗಳು, ತಾಲೂಕು ತಹಶೀಲ್ದಾರರು, ನಗರಸಭೆ, ಪುರಸಭೆಗಳ ಆಯುಕ್ತರು, ಪಿಡಿಒಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡು ತಿದ್ದರು.
ದೇಶದ ಅಭಿವೃದ್ಧಿಗಾಗಿ ಯುವಜನರ ಸಾಮರ್ಥ್ಯವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ಸಾಧ್ಯ. ಈ ಹಿನ್ನೆಲೆಯಲ್ಲಿ ಭಾರತ್ ಜೋಡೋ ಯುವ ಸಂಘಗಳು ಯುವಕರಲ್ಲಿ ನಾಯಕತ್ವ ಗುಣ, ಶಿಸ್ತು ಹಾಗೂ ಸಾಮಾಜಿಕ ಬದ್ಧತೆಯನ್ನು ಬೆಳೆಸುವ ವೇದಿಕೆಯಾಗಬೇಕು ಎಂದು ಅವರು ಹೇಳಿದರು.
ಯುವ ಸಂಘಗಳ ರಚನೆ ಪ್ರಕ್ರಿಯೆಯು ನಿಯಮಾನುಸಾರವಾಗಿ, ಪಾರದರ್ಶಕ ಹಾಗೂ ಯಶಸ್ವಿಯಾಗಿ ನಡೆಯ ಬೇಕು. ಯುವಜನತೆಗೆ ಕ್ರೀಡೆ, ಕೌಶಲ್ಯಾಭಿವೃದ್ಧಿ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದ್ದು, ಸಂಬಂಧಪಟ್ಟ ಎಲ್ಲಾ ಇಲಾಖಾ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದರು.
ಯಾವುದೇ ಭಾರತ್ ಜೋಡೋ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಮುಂದಿನ ಎರಡು ವರ್ಷಗಳ ಅವಧಿಗೆ ಪುನರಾವರ್ತನೆಯಾಗಲು ಅವಕಾಶವಿರುವುದಿಲ್ಲ. ಸಂಘದ ಕಾರ್ಯಕಾರಿ ಸಮಿತಿಯು ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳನ್ನು ಸಮವಾಗಿ ಪ್ರತಿನಿಧಿಸುವಂತಿರುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಭಾರತ್ ಜೋಡೋ ಯುವ ಸಂಘಗಳ ಉದ್ದೇಶ, ರಚನೆ, ಕಾರ್ಯವ್ಯಾಪ್ತಿ ಹಾಗೂ ಯುವಜನರನ್ನು ಸಂಘಟಿಸಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸುವ ಕುರಿತು ಚರ್ಚಿಸಲಾಯಿತು. ಯುವಜನರಲ್ಲಿ ದೇಶಭಕ್ತಿ, ಸಾಮಾ ಜಿಕ ಜವಾಬ್ದಾರಿ, ರಾಷ್ಟ್ರೀಯ ಏಕತೆ ಹಾಗೂ ಸಹೋದರತ್ವ ಭಾವನೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಸಂಘಗಳ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ವೆಬ್ ಪೋರ್ಟಲ್ ಅಥವಾ ಮೊಬೈಲ್ ಆ್ಯಪ್ ಮೂಲಕ ಅಥವಾ ಗ್ರಾಮ ಪಂಚಾಯತಿ ಹಾಗೂ ನಗರ ಪ್ರದೇಶಗಳಲ್ಲಿ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ನಾಗರಿಕ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಪ್ರತಿಯೊಬ್ಬ ಸದಸ್ಯರ ನೋಂದಣಿಗೆ ಆಧಾರ್ ಕಡ್ಡಾಯವಾಗಿದೆ. 16 ವಷರ್ ದಿಂದ 35 ವರ್ಷದ ಒಳಗಿನ ಯುವಕ ಯುವತಿಯರಿಗೆ ಸಂಘಗಳ ಸದಸ್ಯ ರಾಗಲು ಅವಕಾಶವಿದೆ. ಘಟಕ ರಚನೆಗೆ ಕನಿಷ್ಠ 100 ಯುವ ಸದಸ್ಯರಿರ ಬೇಕು. ಪ್ರತಿ ಸದಸ್ಯನಿಗೆ ನೋಂದಣಿ ಶುಲ್ಕ ರೂ. 10 ಇದ್ದು, ಪ್ರತಿಯೊಂದು ಸಂಘವನ್ನು ಕರ್ನಾಟಕ ಸೊಸೈಟಿಸ್ ರಿಜಿಸ್ಟ್ರೇಶನ್ ಆಕ್ಟ್ 1960 ಅಡಿಯಲ್ಲಿ ನೋಂದಾಯಿಸಬೇಕು. ಅರ್ಜಿದಾರರು ಅದೇ ಗ್ರಾಮದ ಪಂಚಾಯತ್ ವಾರ್ಡಿನ ಸಾಮಾನ್ಯ ನಿವಾಸಿ ಆಗಿರಬೇಕು. ಪ್ರತಿ ಸದಸ್ಯ ಒಂದು ಸಂಘಕ್ಕೆ ಮಾತ್ರ ಸದಸ್ಯರಾಗಲು ಅರ್ಹರು ಎಂದು ಅವರು ತಿಳಿಸಿದರು.
ಘಟಕಗಳ ನೋಂದಣಿ ಮತ್ತು ಸಾಪ್ಟ್‌ವೇರ್ ಸಜ್ಜುಗೊಳಿಸುವಿಕೆಗಾಗಿ ಜುಲೈ 31ರೊಳಗೆ ನೊಂದಣಿ ಮಾಡಿಸಬೇಕು ಎಂದು ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ರೋಶನ್ ಕುಮಾರ್ ಶೆಟ್ಟಿ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್., ಜಿಲ್ಲಾ ಮಟ್ಟದ ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹಾಗೂ ಎಲ್ಲಾ ತಾಲೂಕು ಮಟ್ಟದ ಗ್ಯಾರಂಟಿ ಸಮಿತಿ ಅಧ್ಯಕ್ಷರು ಹಾಗೂ ಇತರರು ಉಪಸ್ಥಿತರಿದ್ದರು.
ಜಿಪಂನ ಕೋ-ಆರ್ಡಿನೇಟರ್ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು.
4000 ಜನಸಂಖ್ಯೆಗೊಂದು ಭಾರತ್ ಜೋಡೊ ಯುವ ಸಂಘ
ಪ್ರತಿ 4,000 ಜನಸಂಖ್ಯೆಗೆ ಒಂದರಂತೆ ಭಾರತ್ ಜೋಡೋ ಯುವ ಸಂಘವನ್ನು ರಚಿಸಲಾಗುವುದು. 16ರಿಂದ 35 ವರ್ಷದೊಳಗಿನ ಯುವಕ ಯುವತಿಯರು ಈ ಸಂಘದ ಸದಸ್ಯರಾಗಲು ಅರ್ಹರಾಗಿರುವರು. ಪ್ರತಿಯೊಂದು ಸಂಘದಲ್ಲಿ 15 ಜನ ಕಾರ್ಯಕಾರಿ ಸಮಿತಿ ಸದಸ್ಯರಿರುತ್ತಾರೆ. ಪಾರದರ್ಶಕತೆಗಾಗಿ ಲಾಟರಿ (ಚೀಟಿ ಎತ್ತುವ ಪದ್ಧತಿ) ಮೂಲಕ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಮೂವರು ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದ ಸದಸ್ಯರು (ಓರ್ವ ಮಹಿಳೆ), ನಾಲ್ವರು ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಸದಸ್ಯರು (ಓರ್ವ ಮಹಿಳೆ), 8 ಮಂದಿ ಸಾಮಾನ್ಯ ಸದಸ್ಯರು (ಮೂವರು ಮಹಿಳೆಯರು) ಹೀಗೆ ಮೀಸಲಾತಿ ಕಲ್ಪಿಸಲಾಗುವುದು ಎಂದು ಪ್ರತೀಕ್ ಬಾಯಲ್ ತಿಳಿಸಿದರು.
ರಾಜ್ಯದಲ್ಲಿ ಒಟ್ಟು 10,000 ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಸಂಘಗಳಿಗೆ ಪ್ರತಿ ವರ್ಷ ತಲಾ 10 ಲಕ್ಷ ರೂ.ಗಳ ಅನುದಾನ ನೀಡಲಾಗುತ್ತದೆ ಎಂದರು.






