ವಿಶ್ವ ಅಂಚೆಚೀಟಿ ಸ್ಪರ್ಧೆಯಲ್ಲಿ ಡೇನಿಯಲ್ ಮೊಂತೇರೋಗೆ ಬೆಳ್ಳಿ ಪದಕ

ಬ್ರಹ್ಮಾವರ, ಜು.28: ಅಮೆರಿಕದ ಬೋಸ್ಟನ್ ಹಾಗೂ ಹಾಂಗ್‌ಕಾಂಗ್ ಸಮೀಪದ ಮಕಾವೊದಲ್ಲಿ ಇತ್ತೀಚೆಗೆ ನಡೆದ ವಿಶ್ವ ಅಂಚೆ ಚೀಟಿ ಪ್ರದರ್ಶನ ಸ್ಪರ್ಧೆಯಲ್ಲಿ ಜಿಲ್ಲೆಯ ಪ್ರಮುಖ ಅಂಚೆಚೀಟಿ ಸಂಗ್ರಹಕಾರ, ಬ್ರಹ್ಮಾವರ ಎಸ್‌ಎಂಎಸ್ ಕಾಲೇಜಿನ ನಿವೃತ್ತ ಉದ್ಯೋಗಿ ಡೇನಿಯಲ್ ಮೊಂತೇರೋ ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ.
ಬೋಸ್ಟನ್‌ನಲ್ಲಿ ನಡೆದ ವಿಶ್ವ ಅಂಚೆಚೀಟಿ ಪ್ರದರ್ಶನ ‘ಬೋಸ್ಟನ್-2026’ ಸ್ಪರ್ಧೆಯಲ್ಲಿ, ಅಂಚೆಚೀಟಿ ಸಂಗ್ರಹದಲ್ಲಿ ಗಿನ್ನಿಸ್ ದಾಖಲೆ ಮಾಡಿರುವ ಡೇನಿಯಲ್ ಅವರು ಪ್ರದರ್ಶಿಸಿದ ಬಾತುಕೋಳಿ ಅಂಚೆಚೀಟಿಗಳಿಗೆ ಬೆಳ್ಳಿ ಪದಕ ಲಭಿಸಿದೆ.
ಅದೇ ರೀತಿ ಜೂ.26ರಿಂದ ಜು.1ರವರೆಗೆ ಮಕಾವೊದಲ್ಲಿ ನಡೆದ ವಿಶ್ವ ಅಂಚೆಚೀಟಿ ಸ್ಪರ್ಧೆ ‘ಮಕಾವೊ-2026’ರಲ್ಲಿ ಡೇನಿಯಲ್ ಅವರು ಪ್ರದರ್ಶಿಸಿದ ನವಿಲುಗಳ ಅಂಚೆಚೀಟಿ ಸಂಗ್ರಹವೂ ಬೆಳ್ಳಿ ಪದಕಕ್ಕೆ ಭಾಜನ ವಾಗಿದೆ. ಡೇನಿಯಲ್ ಅವರು ಹತ್ತಾರು ದೇಶಗಳಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ 20ಕ್ಕೂ ಅಧಿಕ ಪದಕಗಳನ್ನು ಪಡೆದಿದ್ದಾರೆ.
ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಅನೇಕ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿರುವ ಮೊಂತೇರೊ ಅವರು ದಕ್ಷಿಣ ಕನ್ನಡ ಅಂಚೆಚೀಟಿ ನಾಣ್ಯ ಸಂಗ್ರಾಹಕರ ಸಂಘ ಮಂಗಳೂರು, ಮಣಿಪಾಲ ಅಂಚೆ ಚೀಟಿ ಹಾಗೂ ನಾಣ್ಯ ಸಂಗ್ರಾಹಕ ಸಂಘ ಮಾಹೆ, ಕರ್ನಾಟಕ ಫಿಲಾಟೆಲಿಕ್ ಸೊಸೈಟಿ ಬೆಂಗಳೂರು ಹಾಗೂ ಸೌತ್ ಇಂಡಿಯಾ ಫಿಲಾಟೆಲಿಕ್ ಸೊಸೈಟಿ ಚೆನ್ನೈ ಇವುಗಳ ಸದಸ್ಯರಾಗಿದ್ದಾರೆ. ನಾಡಿನ ಅನೇಕ ಶಾಲಾ- ಕಾಲೇಜುಗಳಲ್ಲಿ, ವಿವಿಧ ಸಂಘಸಂಸ್ಥೆಗಳಲ್ಲಿ 240ಕ್ಕೂ ಅಧಿಕ ಪಕ್ಷಿಗಳ ಅಂಚೆಚೀಟಿ ಪ್ರದರ್ಶನಗಳನ್ನು ನಡೆಸಿ ಪರಿಸರ ಕುರಿತಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ಡೇನಿಯಲ್ ಮೊಂತೇರೊ ನಡೆಸಿದ್ದಾರೆ.






