ನಾಟ್ಯಶಾಸ್ತ್ರವನ್ನು ರಿ-ವಿಜಿಟ್ ಮಾಡುವುದು ಅಗತ್ಯ: ಸುರೇಶ್ ಆನಗಳ್ಳಿ

ಸಾಂದರ್ಭಿಕ ಚಿತ್ರ
ಉಡುಪಿ, ಜು.29: ಜನಸಂಸ್ಕೃತಿಯ ಮೇಲೆ ಅನಾದಿಕಾಲದಿಂದಲೂ ಬಲ ಸಂಸ್ಕೃತಿಯ ಹೇರಿಕೆಯಾಗಿದೆ. ನಾಗರೀಕತೆಯ ಹೆಸರಲ್ಲಿ ಜನಸಂಸ್ಕೃತಿಯ ಮೇಲೆ ಪ್ರಹಾರ ಇತಿಹಾಸದುದ್ದಕ್ಕೂ ನಡೆದಿದೆ. ಬೌದ್ಧ ಸಂಸ್ಕೃತಿಯ ಮೇಲೆ ಶೈವ ಸಿದ್ದಾಂತದ ಪ್ರತಿಪಾದನೆ, ಶೈವ ಸಿದ್ದಾಂತದ ಮೇಲೆ ವೈಷ್ಣವ ಸಿದ್ದಾಂತದ ಪ್ರತಿಪಾದನೆಯನ್ನು ನಾಟ್ಯ ಶಾಸ್ತ್ರದ ಎಲ್ಲಾ ಪ್ರಕಾರಗಳಲ್ಲೂ ದಟ್ಟವಾಗಿ ಕಾಣುತ್ತೇವೆ. ಮತ್ತು ನಾಟ್ಯ ಶಾಸ್ತ್ರದ ತುಂಬಾ ವರ್ಗ ಸಂಘರ್ಷದ ಕುರುಹುಗಳನ್ನು ನಾವು ಕಾಣಬಹುದು. ಹಾಗಾಗಿ ನಾಟ್ಯ ಶಾಸ್ತ್ರವನ್ನು ರಿ-ವಿಜಿಟ್ ಮಾಡಬೇಕಾದ ಅವಶ್ಯಕತೆ ಇದೆ ಎಂದು ಹಿರಿಯ ರಂಗ ನಿರ್ದೇಶಕ ಸುರೇಶ್ ಆನಗಳ್ಳಿ ಅಭಿಪ್ರಾಯ ಪಟ್ಟಿದ್ದಾರೆ.
ಉಡುಪಿ ರಥಬೀದಿ ಗೆಳೆಯರು ಸಾಂಸ್ಕೃತಿಕ ವೇದಿಕೆ ವತಿಯಿಂದ ಉಡುಪಿಯ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ಮಂಗಳವಾರ ಆಯೋಜಿಸಲಾದ ಜನ ಸಂಸ್ಕೃತಿ - ಬಲ ಸಂಸ್ಕೃತಿ ಒಂದು ರಂಗ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಕಣ್ಣಿಗೆ ಕಾಣುವ ವಾಸ್ತವ ಬೇರೆ ಮತ್ತು ಅದನ್ನು ಗ್ರಹಿಸುವ ರೀತಿ ಬೇರೆಯಾಗಿದೆ. ಈ ಕಾರಣದಿಂದಾಗಿಯೇ ವಸ್ತು ಪ್ರಪಂಚವನ್ನು ನಾವು ಚಿಹ್ನೆಗಳ ಮೂಲಕ ವ್ಯಕ್ತಪಡಿಸುತ್ತೇವೆ. ಭಾರತದ ಆರಾಧನಾ ಪರಂಪರೆಯ ಯಾವುದೇ ಪ್ರಕಾರಗಳಲ್ಲಿ ಬ್ರಾಹ್ಮಣರಿಗೆ ದೈವ ಆವಾಹನೆ ಆಗುವುದಿಲ್ಲ. ಶೂದ್ರರಿಗೆ ಮಾತ್ರ ದೈವ ಆವಾಹನೆಯಾಗುತ್ತದೆ. ಆದರೆ ನಾಗಮಂಡಲದಲ್ಲಿ ಇದರ ವಿರುದ್ಧವಾಗಿ ಬ್ರಾಹ್ಮಣರ ಮೈ ಮೇಲೆ ದೈವದ ಆವಾಹನೆ ಆಗುತ್ತದೆ ಎಂದರು.
ಭಾರತದ ಪ್ರದರ್ಶನ ಕಲೆಗಳು ಗುರುತ್ವಾಕರ್ಷಣೆಯ ದಿಕ್ಕಿನಲ್ಲಿ ನೆಲಕುಟ್ಟಿ ನೃತ್ಯ ಮಾಡಿದರೆ, ಯೂರೋಪ್ ಮತ್ತು ಪಾಶ್ಚಾತ್ಯ ದೇಶಗಳಲ್ಲಿ ಗುರುತ್ವಾಕರ್ಷಣೆಯ ವಿರುದ್ಧ ದಿಕ್ಕಿನಲ್ಲಿ ಜಿಗಿಯುವುದರ ನೃತ್ಯದ ಭಂಗಿಗಳಿವೆ. ಆದರೆ ನಾಗಮಂಡಲದಲ್ಲಿ ಬಳಸುವ ನೃತ್ಯ ಅದು ಆದಿವಾಸಿಗಳಲ್ಲಿ ನಡು ಬಳಸಿ ನಡೆಯುವ ನೃತ್ಯವನ್ನು ಹೋಲುತ್ತದೆ. ಹಾಗಾಗಿ ನಾಗಮಂಡಲ ಎನ್ನುವುದು ಬಹಳ ಪ್ರಾಚೀನವಾದ ಆರಾಧನಾ ಕಲೆಯಾಗಿದೆ ಎಂದು ಅವರು ಹೇಳಿದರು.
ಭರತನಾಟ್ಯ, ನಾಗಮಂಡಲ, ಜಾತ್ರಾ, ಕಥಕ್ಕಳಿ, ಮೋಹಿನಿಯಟ್ಟಂ ಈ ಎಲ್ಲ ಪ್ರದರ್ಶನ ಕಲೆಗಳು ಬ್ರಾಹ್ಮಣೀಕರಣ ಗೊಂಡಿದೆ. ಭರತನಾಟ್ಯವು ಅಯ್ಯಂಗಾರ್ ಕುಟುಂಬದಲ್ಲಿ ವರಾನ್ವೇಷಣೆಯ ಕಾರ್ಯಕ್ರಮವಾಗಿದೆ. ಜಾತ್ರಾ, ಕಥಕ್ಕಳಿ ಮತ್ತು ಮೋಹಿನಿಯಟ್ಟಂ ತುಂಬಾ, ಭಾಗವತದ ಕಥೆಗಳನ್ನು ಇಟ್ಟುಕೊಂಡು ವೈಷ್ಣವ ಸಿದ್ಧಾಂತವನ್ನು ಪ್ರತಿಪಾದನೆ ಮಾಡುತ್ತಿವೆ. ಈ ಸಿದ್ಧಾಂತಗಳು ಮೇಲ್ನೋಟಕ್ಕೆ ಕಾಣಿಸದೆ ಇರಬಹುದು. ಆದರೆ ಅವೆಲ್ಲ ಅಂತರ್ಗತವಾಗಿಯೇ ಆವರಿಸಿಕೊಂಡು ಬಿಟ್ಟಿವೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಇಂದು ನಾವೆಲ್ಲ ಸಾಂಸ್ಕೃತಿಕ ವಿಸ್ಮೃತಿಗೆ ಒಳಗಾಗಿದ್ದೇವೆ. ಕೊಲೋನಿಯಲ್ ಪೊಲಿಟಿಕ್ಸ್(ವಸಾಹತುಶಾಹಿ ರಾಜಕೀಯ) ನಮ್ಮನ್ನು ಈ ಮರೆವಿಗೆ ಒಳಗಾಗಿಸಿದೆ ಎಂದ ಅವರು, ಇತ್ತೀಚಿನ ಆಧುನಿಕ ರಂಗಭೂಮಿಯಲ್ಲಿ ಡ್ರೆಮಾಟಿಕ್ ಥಿಯೇಟರ್ ಎನ್ನುವುದೇ ಶ್ರೇಷ್ಠ ಎಂಬ ವಾದವನ್ನು ಮುಂದಿಡ ಲಾಗುತ್ತಿದೆ. ರಾಜಕೀಯ ಶಕ್ತಿಗಳು ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ರಾಜಕೀಯದ ದಾಳವಾಗಿಸಿದ್ದಾರೆ. ಆರ್ಎಸ್ಎಸ್ ಎಂಬ ಹಿಂದುತ್ವವಾದಿ ಸಂಘಟನೆ ಗಾಂಧಿ ಮತ್ತು ಅಂಬೇಡ್ಕರ್ ನಡುವೆ ನಿಂತು ಇವರಿಬ್ಬರನ್ನು ಬಳಸಿಕೊಂಡು ಅಧಿಕಾರ ಹಿಡಿಯುವುದು ಹೇಗೆ ಎಂದು ನೋಡುತ್ತಿದೆ. ಎಂದು ಅವರು ಅಭಿಪ್ರಾಯ ಪಟ್ಟರು.
ಸಂವಾದದಲ್ಲಿ ಹಿರಿಯ ವಿಮರ್ಶಕರಾದ ಬಿ.ಭಾಸ್ಕರ್ ರಾವ್, ರಂಗ ನಿರ್ದೇಶಕ ಬಾಸುಮ ಕೊಡಗು, ಚಿಂತಕ ಫಣಿರಾಜ್, ಉಪನ್ಯಾಸಕ ರಾಮಾಂಜಿ ನಮ್ಮ ಭೂಮಿ ಮಾತನಾಡಿದರು. ರಥಬೀದಿ ಗೆಳೆಯರ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಪ್ರೊ. ಸುಬ್ರಮಣ್ಯ ಜೋಶಿ ವಂದಿಸಿದರು. ನಾಟಕ ವಿಭಾಗದ ಸಂಚಾಲಕ ಸಂತೋಷ್ ನಾಯಕ್ ಪಟ್ಲ ಕಾರ್ಯಕ್ರಮ ನಿರೂಪಿಸಿದರು.






