ಕೋಡಿ ಬ್ಯಾರೀಸ್ ಶಿಕ್ಷಣ ಸಂಸ್ಥೆಯಲ್ಲಿ ಪುನಶ್ಚೇತನ ಕಾರ್ಯಗಾರ

ಕುಂದಾಪುರ, ಜು.29: ಕೋಡಿ ಬ್ಯಾರಿಸ್ ಪ್ರಥಮ ದರ್ಜೆ ಕಾಲೇಜು ವತಿಯಿಂದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ‘ಯಶಸ್ವಿ ಶಿಕ್ಷಕ’ ಎಂಬ ವಿಷಯದ ಕುರಿತ ಪುನಶ್ಚೇತನ ಕಾರ್ಯಗಾರವನ್ನು ಬಿಹೈವ್ ಕನ್ವೆನ್ಷನ್ ಹಾಲ್‌ನಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಕುಂದಾಪುರ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲ ಡಾ.ಚೇತನ್ ಶೆಟ್ಟಿ ಕೋವಾಡಿ ಮಾತನಾಡಿ, ಶಾಲಾ ವಾತಾವರಣ ಮಾತ್ರವಲ್ಲ ಸಾಮಾಜಿಕ ಬದುಕಿನಲ್ಲಿಯೂ ಶಿಕ್ಷಕರು ಪ್ರಜ್ಞಾವಂತರಾಗಿರಬೇಕು. ನಿರಂತರ ಕಲಿಕೆ, ಮಕ್ಕಳ ಬಗ್ಗೆ ಕಾಳಜಿ, ಪರಿಣಾಮಕಾರಿ ಬೋಧನೆ, ಸೃಜನಶೀಲತೆ ಈ ಅಂಶಗಳು ಉತ್ತಮ ಶಿಕ್ಷಕನನ್ನು ರೂಪಿಸ ಬಲ್ಲವು. ಅಧ್ಯಯನ, ಸಂಶೋಧನೆ, ಪುನಶ್ಚೇತನ ಶಿಕ್ಷಕರ ಬದುಕಿನ ಮಹತ್ವದ ಅಂಶವಾಗಬೇಕು. ಯಶಸ್ವಿ ಶಿಕ್ಷಕ ಉತ್ತಮ ಸಮಾಜದ ನಿರ್ಮಾತೃ ಎಂದು ಹೇಳಿದರು.
ಬ್ಯಾರಿಸ್ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಅಶ್ವಿನಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಶಬೀನಾ ಹಂಝಾ, ಉಪ ಪ್ರಾಂಶುಪಾಲೆ ಅಫ್ರೀನ್ ಖಾನ್, ಐಕ್ಯೂಎಸಿ ಸಂಯೋಜಕಿ ಹಾಗೂ ಗಣಕ ವಿಭಾಗದ ಮುಖ್ಯಸ್ಥೆ ನೂತನ ಎಸ್., ಪಿಯು ಕಾಲೇಜಿನ ಪ್ರಾಂಶುಪಾಲೆ ಝಿಯಾನ ಉಪಸ್ಥಿತರಿದ್ದರು.
ವಾಣಿಜ್ಯ ವಿಭಾಗದ ಮುಖ್ಯಸ್ಥೆ ವಿನುತ ಯು.ಎನ್. ಅತಿಥಿಗಳನ್ನು ಪರಿಚಯಿಸಿದರು. ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸಹರಾ ಗಫೂರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಬ್ಯಾರಿಸ್ ಸಮೂಹ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ವರ್ಗದವರು ಕಾರ್ಯಗಾರದಲ್ಲಿ ಪಾಲ್ಗೊಂಡರು.






