ಹಡಪದ ಅಪ್ಪಣ್ಣ ಚಿಂತನೆಗಳು ಮನುಕುಲದ ಉದ್ಧಾರಕ್ಕೆ ದಾರಿದೀಪ: ಮಂಜುನಾಥ ಪೂಜಾರಿ

ಉಡುಪಿ, ಜು.29: ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಯಾಗಿದ್ದ ಶಿವಶರಣ ಹಡಪದ ಅಪ್ಪಣ್ಣ, ಅಂದಿನ ಕಾಲದಲ್ಲಿ ಸಮಾಜವು ಎದುರಿಸುತ್ತಿದ್ದ ಮೌಢ್ಯತೆಗಳನ್ನು ಧಿಕ್ಕರಿಸಿ, ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಮಹಾನ್ ಶರಣರಾಗಿದ್ದರು. ಅವರ ವಚನಗಳು ಹಾಗೂ ಚಿಂತನೆಗಳು ಇಂದಿಗೂ ಮನುಕುಲದ ಉದ್ಧಾರಕ್ಕೆ ದಾರಿದೀಪವಾಗಿದೆ ಎಂದು ಶ್ರೀನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜನಾಥ ಪೂಜಾರಿ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ಬುಧವಾರ ನಡೆದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಕಾಲಕಾಲಕ್ಕೆ ಹಲವಾರು ನಾಯಕರು, ಸಂತರು, ದಾಸರು, ದಾರ್ಶನಿಕರು ಜನ್ಮತಾಳಿ ಸಮಾಜದ ಸುಧಾರಣೆಗಾಗಿ ಹೆಜ್ಜೆ ಇಟ್ಟಿದ್ದಾರೆ. ಅದೇ ರೀತಿ 12ನೇ ಶತಮಾನದಲ್ಲಿ ಬಸವಣ್ಣನವರು ಅಂದಿನ ಕಾಲಘಟ್ಟದಲ್ಲಿದ್ದ ಮೇಲು-ಕೀಳು, ಅಸ್ಪೃಶ್ಯತೆ, ಅನಾಚಾರ, ಕಂದಾಚಾರ ಸೇರಿದಂತೆ ಮತ್ತಿತರ ಸಾಮಾಜಿಕ ಶೋಷಣೆಯ ವಿರುದ್ಧ ಹೋರಾಡಲು ಜನರಿಗೆ ವಚನಗಳ ಮೂಲಕ ಮನಮುಟ್ಟುವ ಹಾಗೆ ತಿಳಿಹೇಳುತ್ತಿದ್ದರು. ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಹಡಪದ ಅಪ್ಪಣ್ಣನವರು ಜಾತಿ ಪದ್ಧತಿ, ಮೂಢನಂಬಿಕೆ ಮತ್ತು ಅಸಮಾನತೆಯ ವಿರುದ್ಧ ತಮ್ಮ ವಚನಗಳ ಮೂಲಕ ಸಾಮಾಜಿಕ ಸುಧಾರಣೆಗೆ ಧ್ವನಿ ಎತ್ತಿದ್ದರು ಎಂದರು.
ಕೆಲಸದಲ್ಲಿ ದೇವರನ್ನು ಕಾಣುವುದು ಕಾಯಕವೇ ಕೈಲಾಸ ಪದದ ತಾತ್ಪರ್ಯ. ಪ್ರತಿಯೊಬ್ಬರೂ ತಮ್ಮ ತಮ್ಮ ಕೆಲಸಗಳನ್ನು ಪ್ರಾಮಾಣಿಕವಾಗಿ, ಬದ್ಧತೆಯಿಂದ ಮಾಡಬೇಕು. ನುಡಿದಂತೆ ನಡೆಯಬೇಕು. ಪ್ರಸ್ತುತ ಸಮಾಜದಲ್ಲಿ ದುಶ್ಚಟಗಳಿಂದ ದೂರು ಉಳಿಯುವುದರೊಂದಿಗೆ ಯುವ ಪೀಳಿಗೆಯು ವ್ಯಸನಗಳಿಗೆ ಬಲಿಯಾಗದಂತೆ ನೋಡಿಕೊ ಳ್ಳುವುದು ಪೋಷಕರ, ಗುರು-ಹಿರಿಯರ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.
ಶಿಕ್ಷಕ ಜಿ.ಪಿ.ಪ್ರಭಾಕರ ತುಮರಿ ಉಪನ್ಯಾಸ ನೀಡಿ, ಹಡಪದ ಅಪ್ಪಣ್ಣ ಹನ್ನೆರಡನೆಯ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರು. ಇವರು ಹಡಪದ ಸಮಾಜದವರಾಗಿದ್ದು ಬಸವಣ್ಣನವರ ಬಲಗೈ ಬಂಟನೆ ಅದೇ ಹೆಸರು ಪಡೆದಿದ್ದರು. ಬಸವಣ್ಣ ಅವರೊಂದಿಗೆ ಕಾಯಕ ಮಾಡುತ್ತಲೇ ಅವರ ಕಾಯಕವೇ ಕೈಲಾಸ ಎಂಬ ತತ್ವವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರು. ಶ್ರಮಕ್ಕೆ ಗೌರವ ನೀಡಿದ ಅವರು, ಪ್ರತಿಯೊಂದು ಕಾಯಕವೂ ಪವಿತ್ರ ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದರು ಎಂದರು.
ಹಡಪದ ಅಪ್ಪಣ್ಣರು ಕೇವಲ ಒಬ್ಬ ವಚನಕಾರರಲ್ಲ. ಬಸವ ತತ್ವದ ನಿಷ್ಠಾವಂತ ಅನುಯಾಯಿಯಾದ ಅಪ್ಪಣ್ಣ ಅವರ ಬದುಕು ಇಂದಿನ ಸಮಾಜಕ್ಕೆ ಸ್ಫೂರ್ತಿಯಾಗಿದೆ. ಅವರ ಸಿದ್ದಾಂತದಅತೆ ಪ್ರತಿಯೊಬ್ಬರು ತಮ್ಮ ಕಾಯಕದ ಕುರಿತು ಯಾವುದೇ ಕೀಳರಿಮೆ ಇಲ್ಲದೇ ಗೌರವ ಮತ್ತು ಪ್ರಾಮಾಣಿಕತೆ ಹೊಂದಿದಾಗ ಮಾತ್ರ ಬದುಕಿನಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದ ಅವರು, ದಾರ್ಶನಿಕರ ಬದುಕಿನ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಕಾರ್ಯಕ್ರಮಗಳು ಸಾರ್ಥಕತೆ ಗೊಳ್ಳುತ್ತವೆ ಎಂದರು.
ಅಧ್ಯಕ್ಷತೆಯನ್ನು ಉಡುಪಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಶೆಟ್ಟಿ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಇಲಾಖೆಯ ಸಿಬ್ಬಂದಿ ವರ್ಷಾ ಬಿ.ಕೋಟ್ಯಾನ್ ನಿರೂಪಿಸಿ ವಂದಿಸಿದರು.






