ಟಿ.ಎನ್.ನಾಗರತ್ನರಿಗೆ ಸೇಡಿಯಾಪು ಪ್ರಶಸ್ತಿ ಪ್ರದಾನ

ಉಡುಪಿ, ಜು.30: ಇಂದು ಗ್ರಂಥ ಸಂಪಾದನೆ, ಸಂಶೋಧನೆಯ ಕೆಲಸಗಳು ಕನ್ನಡದ ಸಂದರ್ಭದಲ್ಲಿ ತುಂಬಾ ನಿಧಾನವಾಗುತ್ತಿವೆ. ಕಾರಣಗಳು ಹಲವು. ಈ ಕ್ಷೇತ್ರದಲ್ಲಿ ಆಸಕ್ತಿವುಳ್ಳವರು ಕಡಿಮೆ ಮತ್ತು ಈ ಕ್ಷೇತ್ರಕ್ಕೆ ಬಂದವರು ಉದ್ಯೋಗಾವಕಾಶವನ್ನು ಬಯಸಿದರೆ ಅದಕ್ಕೆ ಇಂದು ಅವಕಾಶಗಳು ಸಹ ಕಡಿಮೆ ಎಂದು ನಾಡಿನ ಹಿರಿಯ ವಿದ್ವಾಂಸರೂ, ಸಂಶೋಧಕರೂ ಆಗಿರುವ ಪ್ರೊ.ಟಿ.ವಿ.ವೆಂಕಟಾಚಲ ಶಾಸ್ತ್ರಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ವತಿಯಿಂದ ನೀಡಲಾದ 2026ನೇ ಸಾಲಿನ ಸೇಡಿಯಾಪು ಪ್ರಶಸ್ತಿಯನ್ನು ಮೈಸೂರಿನ ಡಾ.ಟಿ.ಎನ್.ನಾಗರತ್ನ ಅವರಿಗೆ ಪ್ರದಾನ ಮಾಡಿ ಅವರು ಮಾತನಾಡುತಿದ್ದರು. ಮೈಸೂರಿನಲ್ಲಿರುವ ಡಾ.ನಾಗರತ್ನ ಅವರು ಮನೆಯಲ್ಲಿ ಇತ್ತೀಚೆಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಹತ್ತಾರು ವರ್ಷಗಳ ಹಿಂದೆ ತಾತ್ತ್ವಿಕ ಶುದ್ಧತೆಯಿಂದ, ಬದ್ಧತೆ ಯಿಂದ ಇಂಥಹ ಗಹನವಾದ ವಿಚಾರಗಳನ್ನು ಅಪಾರ ಗೌರವದಿಂದ ಮಾಡುತ್ತಿದ್ದರು. ಹೀಗಾಗಿ ದಾಸ ಸಾಹಿತ್ಯದ ಜನಪ್ರಿಯ ಪಠ್ಯ ಹಾಗೂ ಅಧ್ಯಯನಯುಕ್ತ ಸಂಶೋಧನ ಪಠ್ಯಗಳೆಂಬ ಎರಡು ಬಗೆಯ ರೂಪಗಳಲ್ಲಿ ಓದುಗರಿಗೆ ಲಭಿಸುತ್ತಿತ್ತು ಎಂದು ಅವರು ವಿವರಿಸಿದರು.
ಸಂಶೋಧಿತ ಪಠ್ಯಗಳನ್ನು ಹೊರತರುವಲ್ಲಿ ಅಪಾರ ಶ್ರಮ ಬೇಕಾಗುತ್ತಿತ್ತು. ಕರ್ನಾಟಕದಲ್ಲಿ ಪ್ರೊ. ಜಿ. ವರದರಾಜ ರಾಯರು ದಾಸ ಸಾಹಿತ್ಯದ ಸಂಶೋಧನೆ, ಸಂಪಾದನೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಅನಂತರದಲ್ಲಿ ಡಾ.ಟಿ.ಎನ್. ನಾಗರತ್ನ ಅವರು ಈ ಹಾದಿಯಲ್ಲಿ ನಡೆದು ದಾಸ ಸಾಹಿತ್ಯದ ಅಧಿಕೃತ ಪಠ್ಯಗಳಿಗೆ ಬುನಾದಿ ಹಾಡಿದರು. ಸದಾ ಅಧ್ಯಯನಶೀಲರಾದ ಡಾ.ಟಿ.ಎನ್. ನಾಗರತ್ನ ಕನ್ನಡ ಸಾರಸ್ವತ ಲೋಕಕ್ಕೆ ಹಲವಾರು ಮೌಲಿಕ ಕೃತಿಗಳನ್ನು ನೀಡಿದ್ದಾರೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಟಿ.ಎನ್. ನಾಗರತ್ನ, ಇಂತಹ ಪ್ರಶಸ್ತಿಗಳು ಜೀವನದ ಸಂಭ್ರಮ ಗಳಲ್ಲೊಂದು. ಪ್ರಾತ:ಸ್ಮರಣೀಯರಾದ ಸೇಡಿಯಾಪು ಕೃಷ್ಣಭಟ್ಟರ ಹೆಸರಲ್ಲಿ ಪಡೆದ ಈ ಪ್ರಶಸ್ತಿ ನನ್ನ ಪುಟ್ಟ ಸಾಧನೆಗೆ ಗರಿ ಇಟ್ಟಂತಾಗಿದೆ ಎಂದರು.
ಹಿರಿಯ ವಿದ್ವಾಂಸರೂ, ಸೇಡಿಯಾಪು ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರೂ ಆದ ಡಾ.ಪಾದೇಕಲ್ಲು ವಿಷ್ಣು ಭಟ್ಟರು ಅಭಿನಂದನಾ ಮಾತುಗಳ ನ್ನಾಡಿದರು. ಮುಳಿಯ ರಾಘವಯ್ಯ, ಪ್ರೊ. ಎಚ್.ಎಂ. ನಾಗರಾಜರಾವ್ ಸೇರಿ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಪ್ರಸ್ತಾವನೆಯ ಮಾತುಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಆರ್‌ಆರ್‌ಸಿಯ ಸಹ ಸಂಶೋಧಕ ಡಾ. ಅರುಣ್‌ಕುಮಾರ್ ಎಸ್.ಆರ್. ಕಾಯಕ್ರಮ ನಿರೂಪಿಸಿ ವಂದಿಸಿದರು.






