ಉಡುಪಿ: ಮಳೆ-ಬಿಸಿಲು-ಮೋಡ ಕಣ್ಣುಮುಚ್ಚಾಲೆ

ಉಡುಪಿ: ಜಿಲ್ಲೆಯಲ್ಲಿ ಇಂದು ಮಳೆ, ಬಿಸಿಲು ಹಾಗೂ ಮೋಡಗಳು ಕಣ್ಣಮುಚ್ಚಾಲೆಯಾಟವಾಡಿದವು. ಕೆಲವು ಕ್ಷಣ ದಟ್ಟ ಮೋಡದೊಂದಿಗೆ ಜೋರಾಗಿ ಮಳೆ ಸುರಿದರೆ, ಕೆಲಹೊತ್ತಿನ ಬಳಿಕ ಅಲ್ಲಲ್ಲಿ ಒಳ್ಳೆಯ ಬಿಸಿಲು ಕಾಣಿಸಿಕೊಂಡಿತ್ತು. ಮತ್ತೆ ಮೋಡ ಮುಸುಕಿದ ವಾತಾವಣ ಕಂಡುಬಂತು.
ಮಲೆನಾಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ ಜಿಲ್ಲೆಯಲ್ಲಿ ಮಳೆ ಅಷ್ಟು ಬಿರುಸು ಹೊಂದಿರ ಲಿಲ್ಲ. ಕೇವಲ ಪಶ್ಚಿಮ ಘಟ್ಟದ ತಪ್ಪಲಿನ ಹೆಬಿ ಮತ್ತು ಕಾರ್ಕಳ ತಾಲೂಕುಗಳಲ್ಲಿ ಮಾತ್ರ ಹೆಚ್ಚಿನ ಮಳೆಯಾಯಿತು. ಅಲ್ಲದೇ ನಿನ್ನೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾದ ಕಾರಣ ಹಾಗೂ ಆಗಾಗ ಜೋರಾದ ಗಾಳಿ ಬೀಸುತಿದ್ದ ಕಾರಣ ಜಿಲ್ಲೆಯ ಹೆಚ್ಚಿನ ನದಿಗಳು ತುಂಬಿ ಹರಿದವು. ಆದರೆ ಇಂದು ಮತ್ತೆ ನೀರಿನ ಮಟ್ಟ ಕಡಿಮೆಯಾಗಿದೆ.
ಉಡುಪಿ ಜಿಲ್ಲೆಯಲ್ಲಿ 24 ಗಂಟೆಗಳ ಅವಧಿಯಲ್ಲಿ ಸರಾಸರಿ 30.1ಮಿ.ಮೀ. ಮಳೆಯಾಗಿದೆ. ಕಾರ್ಕಳದಲ್ಲಿ 42.8 ಮಿ.ಮೀ., ಹೆಬ್ರಿಯಲ್ಲಿ 4.7, ಬೈಂದೂರಿನಲ್ಲಿ 30.6, ಕುಂದಾಪುರದಲ್ಲಿ 28.3, ಉಡುಪಿಯಲ್ಲಿ 202, ಬ್ರಹ್ಮಾವರದಲ್ಲಿ 15.7 ಹಾಗೂ ಕಾಪುವಿನಲ್ಲಿ 11.0 ಮಿ.ಮೀ. ಮಳೆಯಾದ ವರದಿ ಬಂದಿದೆ.




