ಯಕ್ಷಗುರು ಕೃಷ್ಣಸ್ವಾಮಿ ಜೋಯಿಸ್ ನಿಧನ

ಬ್ರಹ್ಮಾವರ, ಆ.4: ಯಕ್ಷಗುರು, ಹಿರಿಯ ಸಾಂಪ್ರದಾಯಿಕ ಮದ್ದಲೆವಾದಕ ರಾದ ಬ್ರಹ್ಮಾವರ ಚಾಂತಾರು ನಿವಾಸಿ ಕೃಷ್ಣಸ್ವಾಮಿ ಜೋಯಿಸ್ (75) ಮಂಗಳವಾರ ಮುಂಜಾನೆ ಅಲ್ಪಕಾಲದ ಅಸೌಖ್ಯದಿಂದ ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಮೊದಲ ತಂಡದ ವಿದ್ಯಾರ್ಥಿ ಯಾಗಿದ್ದ ಜೋಯಿಸ್, ಭಾಗವತ ನಾರ್ಣಪ್ಪ ಉಪ್ಪೂರ ಮತ್ತು ಬೇಳಂಜೆ ತಿಮ್ಮಪ್ಪ ನಾಯಕರ ಶಿಷ್ಯರಾಗಿ, ಭಾಗವತಿಕೆ ಮತ್ತು ಮದ್ದಲೆ ವಾದನದಲ್ಲಿ ವಿಶೇಷ ಪರಿಣತಿಯನ್ನು ಹೊಂದಿದ್ದರು. ಎಚ್.ಸುಬ್ಬಣ್ಣ ಭಟ್ಟರ ಮಾರ್ಗದರ್ಶನದಲ್ಲಿ ಪ್ರಸಾಧನ ತಜ್ಞರಾಗಿಯೂ ಪರಿಣಿತಿಯನ್ನು ಪಡೆದು ಜನಪ್ರಿಯರಾಗಿದ್ದರು.
ಬ್ರಹ್ಮಾವರದ ಅಜಪುರ ಯಕ್ಷಗಾನ ಮಂಡಳಿಯ ಗೌರವಾಧ್ಯಕ್ಷರಾಗಿದ್ದ ಇವರು, ಮಣ್ಣಿನ ಗಣಪತಿ ಮೂರ್ತಿ ನಿರ್ಮಾಣ ದಲ್ಲೂ ಸಿದ್ಧಹಸ್ತರಾಗಿದ್ದರು. ಸಾಲಿಗ್ರಾಮ ಮಕ್ಕಳ ಮೇಳದಲ್ಲಿ ದೀರ್ಘಕಾಲ ಮದ್ದಲೆವಾದಕರಾಗಿ ಇವರು ದೇಶ, ವಿದೇಶಗಳ ಪ್ರದರ್ಶನಗಳಲ್ಲಿ ಹಿಮ್ಮೇಳ ವಾದಕರಾಗಿ, ಪ್ರಸಾಧನ ಕಲಾವಿದರಾಗಿ ಭಾಗವಹಿಸಿದ್ದರು. ಯಕ್ಷಗಾನದ ಹಿಮ್ಮೇಳ ಹಾಗೂ ಮುಮ್ಮೇಳ ಎರಡರ ಪಾರಂಪರಿಕ ಸೂಕ್ಷ್ಮತೆಗಳನ್ನು ಬಲ್ಲ ಜೋಯಿಸರು ನೂರಾರು ಶಿಷ್ಯರನ್ನು ಯಕ್ಷಗಾನಕ್ಕೆ ನೀಡಿದ್ದಾರೆ.
ಯಕ್ಷಶಿಕ್ಷಣ ಟ್ರಸ್ಟ್‌ನಲ್ಲೂ ಹಲವು ವರ್ಷಗಳ ಕಾಲ ಗುರುಗಳಾಗಿ ಬ್ರಹ್ಮಾವರ ಆಸುಪಾಸಿನ ಶಾಲೆಗಳಲ್ಲಿ ಮಕ್ಕಳಿಗೆ ಯಕ್ಷಗಾನ ಕಲಿಸಿದ್ದರು. ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ಉಡುಪಿಯ ಯಕ್ಷಗಾನ ಕಲಾರಂಗ ಇವರಿಗೆ ‘ಕಲಾರಂಗ ಪ್ರಶಸ್ತಿ’ ನೀಡಿ ಗೌರವಿಸಿತ್ತು.
ಕೃಷ್ಣಸ್ವಾಮಿ ಜೋಯಿಸ್ ಅವರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧುಬಳಗ ಮತ್ತು ಶಿಷ್ಯವೃಂದವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ಸೂಚಿಸಿದ್ದಾರೆ.






