ಉಡುಪಿ ಜಿಲ್ಲೆಯ ಕುಂದಾಪುರ, ಹೆಬ್ರಿಗಳಲ್ಲಿ ಧಾರಾಕಾರ ಮಳೆ

ಉಡುಪಿ, ಆ.4: ಕಳೆದ 36 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇಂದು ಅಪರಾಹ್ನದ ಬಳಿಕ ವಿವಿದೆಡೆ ಮಳೆಯ ಬಿರುಸು ಕಡಿಮೆಯಾಗಿದ್ದರೂ, ಕುಂದಾಪುರ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ಆಗಸ್ಟ್ ತಿಂಗಳ ಬಳಿಕ ಮಳೆಯ ಪ್ರಮಾಣದಲ್ಲಿ ಹಠಾತ್ ಏರಿಕೆ ಕಂಡುಬಂದಿದೆ. ಮಳೆಗಾಲದ ಜೂನ್ ತಿಂಗಳಲ್ಲಿ ಶೇ.50ರಷ್ಟು ಕೊರತೆ ಕಂಡ ಉಡುಪಿ ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಮತ್ತೆ ಶೇ.27ರಷ್ಟು ಕೊರತೆ ಕಾಣಿಸಿಕೊಂಡಿತ್ತು. ಆದರೆ ಆಗಸ್ಟ್ ತಿಂಗಳ 1ರಿಂದ 4ರವರೆಗೆ ಶೇ.61ರಷ್ಟು ಅಧಿಕ ಮಳೆಯಾಗಿದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ 171 ಮಿ.ಮೀ. ಮಳೆಯಾಗಬೇಕಿತ್ತು. ಈ ಬಾರಿ ಬಿದ್ದಿರುವುದು 275ಮಿ.ಮೀ. ಮಳೆ.
ಆದರೆ ಈ ವರ್ಷದ ಜನವರಿ 1ರಿಂದ ಆ.4ರವರೆಗಿನ ಮಳೆಯ ಅಂಕಿಅಂಶಗಳನ್ನು ನೋಡಿದಾಗ ವಾಡಿಕೆ ಮಳೆಯಲ್ಲಿ ಈಗಲೂ ಶೇ.31ರಷ್ಟು ಕೊರತೆ ಕಂಡುಬರುತ್ತಿದೆ. ಈ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ 2725 ಮಿ.ಮೀ. ಮಳೆ ಬೀಳಬೇಕಾಗಿದ್ದು, ಈ ಬಾರಿ ಬಿದ್ದಿರುವುದು 1891ಮಿ.ಮೀ. ಮಳೆ ಮಾತ್ರ ಎಂದು ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ಮಾಹಿತಿ ತಿಳಿಸುತ್ತದೆ.
ರಾಜ್ಯದಲ್ಲಿ ಜುಲೈ ಕೊನೆಯವರೆಗೆ ಮಳೆಯಲ್ಲಿ ಕೊರತೆಯೇ ಹೆಚ್ಚಾಗಿ ಕಂಡುಬಂದಿದ್ದರೆ, ಆಗಸ್ಟ್ ತಿಂಗಳಲ್ಲಿ ಕೆಲವು ಜಿಲ್ಲೆಗಳಲ್ಲಿ ಅಧಿಕ ಮಳೆ ಸುರಿಯುತ್ತಿದೆ. ಉಡುಪಿ ಹೊರತು ಪಡಿಸಿ ದಕ್ಷಿಣ ಕನ್ನಡ (ಶೇ.76), ಉತ್ತರ ಕನ್ನಡ (ಶೇ.69), ಚಿಕ್ಕಮಗಳೂರು (ಶೇ.82), ಶಿವಮೊಗ್ಗ (ಶೇ.84), ಕೊಡಗು (ಶೇ.61), ಹಾಸನ (ಶೇ.29), ರಾಯಚೂರು (ಶೇ.26) ಹಾಗೂ ಬೆಳಗಾವಿ (ಶೇ.33) ಜಿಲ್ಲೆಗಳಲ್ಲಿ ಆಗಸ್ಟ್ ತಿಂಗಳಲ್ಲಿ ಅಧಿಕ ಮಳೆಯಾಗುತ್ತಿದೆ.
ಹಕ್ಲಾಡಿಯಲ್ಲಿ ಅತ್ಯಧಿಕ: ಇಂದು ಬೆಳಗ್ಗೆ (ಆ.4)8:30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಬಿದ್ದಿರುವ ಮಳೆಯನ್ನು ಲೆಕ್ಕಕ್ಕೆ ತೆಗೆದುಕೊಂಡಾಗ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹಕ್ಲಾಡಿಯಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಇಲ್ಲಿ 24 ಗಂಟೆಗಳಲ್ಲಿ 189ಮಿ.ಮೀ. ಮಳೆ ಸುರಿದಿದೆ. ಶಿವಮೊಗ್ಗದ ಆಗುಂಬೆಯಲ್ಲಿ 170ಮಿ.ಮೀ. ಮಳೆ ಬಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಶಿರ್ತಾಡಿಯಲ್ಲಿ ಅತ್ಯಧಿಕ ಮಳೆ (133.5ಮಿ.ಮೀ.) ಬಿದ್ದಿದೆ.
ಇದು ಹೊರತು ಪಡಿಸಿ ಉಡುಪಿ ಜಿಲ್ಲೆಯ ಹೆಬ್ರಿ, ಹೆಂಗವಳ್ಳಿ, ಅಂಪಾರುಗಳಲ್ಲಿ 170ಕ್ಕೂ ಅಧಿಕ, ಕುಂದಾಪುರದ ಚಿತ್ತೂರು, ಮಾಳ, ನಾಡ್ಪಾಲುಗಳಲ್ಲಿ 160ಕ್ಕೂ ಅಧಿಕ, ನಾಡಾ, ಮೊಳಹಳ್ಳಿ, ನೀರೆ, ಹಾರ್ದಳ್ಳಿ ಮಂಡಳ್ಳಿ, ಬಸ್ರೂರು, ಬೆಳ್ವೆಗಳಲ್ಲಿ 140ರಿಂದ 160ಮಿ.ಮೀನಷ್ಟು ಮಳೆಯಾದ ವರದಿ ಬಂದಿದೆ. ಈ ವರ್ಷ ಇದೇ ಪ್ರಥಮ ಬಾರಿಗೆ ಉಡುಪಿ ಜಿಲ್ಲೆಯ 30ಕ್ಕೂ ಅಧಿಕ ಗ್ರಾಮಗಳಲ್ಲಿ 100ಮೀ.ಮೀಗೂ ಅಧಿಕ ಮಳೆ ಸುರಿದು ದಾಖಲೆ ಬರೆದಿದೆ.
ಜಿಲ್ಲೆಯ ಸರಾಸರಿ 104.4ಮಿ.ಮೀ.: ಇಂದು ದಿನದಲ್ಲಿ ಉಡುಪಿ ಜಿಲ್ಲೆಯಲ್ಲಿ ಬಿದ್ದ ಸರಾಸರಿ ಮಳೆ 104.4 ಮಿ.ಮೀ ಆಗಿದೆ. ಕುಂದಾಪುರ ತಾಲೂಕಿನಲ್ಲಿ 135.6ಮಿ.ಮೀ. ಮಳೆಯಾದರೆ, ಹೆಬ್ರಿಯಲ್ಲಿ 126.2ಮಿ.ಮೀ. ಮಳೆ ಸುರಿದಿದೆ. ಉಳಿದಂತೆ ಕಾರ್ಕಳದಲ್ಲಿ 97.7, ಬೈಂದೂರಿನಲ್ಲಿ 97.0, ಉಡುಪಿಯಲ್ಲಿ 82.3, ಬ್ರಹ್ಮಾವರದಲ್ಲಿ 76.6 ಹಾಗೂ ಕಾಪುವಿನಲ್ಲಿ 57.2ಮಿ.ಮೀ. ಮಳೆಯಾದ ವರದಿ ಬಂದಿದೆ.
ಮನೆಗೆ ಹಾನಿ: ನಿನ್ನೆಯ ಗಾಳಿ-ಮಳೆಗೆ ಕುಂದಾಪುರ ತಾಲೂಕು ಕೊರ್ಗಿಯ ಶ್ರೀನಿವಾಸ್ ಎಂಬವರ ಮನೆಗೆ ಭಾಗಶ: ಹಾನಿಯುಂಟಾಗಿದ್ದು 80ಸಾವಿರ ರೂ.ಗಳಿಗೂ ಅಧಿಕ ಹಾನಿಯ ಅಂದಾಜು ಮಾಡಲಾಗಿದೆ. ಜಿಲ್ಲೆಯಲ್ಲಿ ಇನ್ನೂ ಕೆಲವು ಮನೆಗಳಿಗೆ ಹಾನಿಯಾಗಿದ್ದರೂ, ಅವುಗಳ ಕುರಿತು ಮಾಹಿತಿ ನೀಡಲು ಭಾರೀ ಮಳೆಯಿಂದ ವಿಳಂಬವಾಗುತ್ತಿದೆ ಎಂದು ತಿಳಿದುಬಂದಿದೆ.
ರೆಂಜಾಳದಲ್ಲಿ ಭೂಕುಸಿತ: ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮದ ಹೆಡ್ಕೆಪ್ರದೇಶದಲ್ಲಿ ಹರಿಪ್ರಸಾದ್ ಹಾಗೂ ಸುಮಿತ್ರಾ ಎಂಬವರ ಮನೆಯ ಸಮೀಪದ ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು, ಇದರಿಂದ ಆಸುಪಾಸಿನ ಐದಾರು ಮನೆಗಳ ಜನರನ್ನು ಖಾಲಿ ಮಾಡಿ ಸಮೀಪದ ಶಾಲೆಯ ಗಂಜಿ ಕೇಂದ್ರಕ್ಕೆ ಸೇರಿಸಲಾಗಿದೆ. ಆದರೆ ಶಾಲೆಯ ಗಂಜಿ ಕೇಂದ್ರಕ್ಕೆ ಹೋಗಲು ಕೆಲವರು ನಿರಾಕರಿಸುತಿದ್ದಾರೆ ಎಂದು ತಿಳಿದುಬಂದಿದೆ.
ಭೂಕುಸಿತ ಸಂಭವಿಸುವ ಸಾದ್ಯತೆ ಇರುವುದರಿಂದ ಮನೆ ಖಾಲಿ ಮಾಡುವಂತೆ ಅಧಿಕಾರಿಗಳು ನಿನ್ನೆ ಬಂದು ಹೇಳಿಹೋಗಿದ್ದಾರೆ. ನಮಗೆ ಯಾವುದೇ ಸೂಕ್ತ ವ್ಯವಸ್ಥೆ ಮಾಡಿಲ್ಲ. ನಾವು ಎಂಟತ್ತು ಮಂದಿ ಹೇಗೆ ಹೋಗುವುದು. ಹೆಂಗಸರು, ಮಕ್ಕಳು ಹಗಲಿನಲ್ಲಿ ಶಾಲೆ ನಡೆಯುವಾಗ ಮಕ್ಕಳಿರುವಾಗ ಉಳಿದುಕೊಳ್ಳುವುದು ಹೇಗೆ ಎಂದು ಮನೆಯ ಯಜಮಾನ ಹರಿಪ್ರಸಾದ್ ತಿಳಿಸಿದರು.
ನಿನ್ನೆ ತಹಶೀಲ್ದಾರರು ಬಂದು ನೋಟೀಸು ಕೊಟ್ಟು ಹೋಗಿದ್ದಾರೆ. ನಮಗೆ ಗಂಜಿಕೇಂದ್ರದಲ್ಲಿ ರಾತ್ರಿ ಉಳಿದು ಕೊಳ್ಳಬಹುದು. ಹಗಲಲ್ಲಿ ಹೇಗೆ ಇರುವುದು ಎಂದ ಅವರು ನಮಗೆ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂದರು. ಒಂದೂವರೆ ಎಕರೆ ಜಾಗದಲ್ಲಿ ಜಾಗ ಒಡೆದು 5ರಿಂದ7 ಅಡಿ ಗ್ಯಾಪ್ ಕಾಣಿಸಿಕೊಂಡಿದೆ. ಮಣ್ಣು ಮೇಲಕ್ಕೆ ಬಂದಿದೆ. ಇಲ್ಲಿ ಕೇರಳದಲ್ಲಾದಂತೆ ಭೂಕುಸಿತದ ಅಪಾಯವಿದೆ ಎಂದು ಸ್ಥಳೀಯ ಗ್ರಾಪಂ ಸದಸ್ಯರು ಹೇಳಿದ್ದಾರೆ.
ಮಂಗಳವಾರ ಸ್ಥಳಕ್ಕೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಭೇಟಿ ನೀಡಿದ್ದಾರೆ. ಇಲ್ಲಿನ ಮನೆಯವರನ್ನು ಸುರಕ್ಷತೆಯ ದೃಷ್ಟಿಯಿಂದ ಸಮೀಪದ ಸರಕಾರಿ ಶಾಲೆಯಲ್ಲಿ ತೆರೆಯಲಾಗಿರುವ ಗಂಜಿಕೇಂದ್ರಕ್ಕೆ ಕಳುಹಿಸುವಂತೆ ಸೂಚಿಸಿದರು. ಅಲ್ಲದೇ ಈ ಪ್ರದೇಶಕ್ಕೆ ಗ್ರಾಮಸ್ಥರಾರಿಗೂ ಬರಲು ಅವಕಾಶ ನೀಡದಂತೆ ಅಧಿಕಾರಿಗಳಿಗೆ ಸೂಚಿಸಿದರು. ಸ್ಥಳದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಕೈಗೊಳ್ಳುವಂತೆ ಸೂಚನೆಯನ್ನೂ ಅವರು ನೀಡಿದರು.
ಗಂಜಿ ಕೇಂದ್ರದಲ್ಲಿ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯ, ಆಹಾರ ಹಾಗೂ ಇತರ ಸೌಲಭ್ಯ ನೀಡುವಂತೆಯೂ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.






