ಕಳಪೆ ಆಮದು ಅಡಿಕೆಯ ಸಮಸ್ಯೆ; ರಾಜ್ಯದ ಅಡಿಕೆ ಬೆಳೆಗಾರರ ನೆರವಿಗೆ ಬರಲು ಕೇಂದ್ರಕ್ಕೆ ಕೋಟ ಒತ್ತಾಯ

ಉಡುಪಿ, ಆ.4: ಕರಾವಳಿ- ಮಲೆನಾಡು ಸೇರಿದಂತೆ, ಕರ್ನಾಟಕ ರಾಜ್ಯದ ಅಡಿಕೆ ಬೆಳೆಗಾರರು ವಿದೇಶಿ ಅಡಿಕೆ ಆಮದಿನ ಸಮಸ್ಯೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಅಡಿಕೆ ಬೆಳೆಗಾರರ ನೆರಗೆ ಬರಬೇಕೆಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ನಿಯಮ 377ರಡಿ ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪನೆ ಸಲ್ಲಿಸುವ ಮೂಲಕ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
ಇಂಡೋನೇಷಿಯಾ, ಮಯಾನ್ಮಾರ್, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಕಳಪೆ ಗುಣಮಟ್ಟದ ಅಡಿಕೆಗಳು ಆಮದಾಗಿ ಭಾರತಕ್ಕೆ ಬರುತ್ತಿದ್ದು, ಅವುಗಳನ್ನು ನಿಯಂತ್ರಿಸದಿದ್ದರೆ ನಮ್ಮ ಅಡಿಕೆ ಬೆಳೆ ಗಾರ ರಿಗೆ ಸಂಕಷ್ಟ ಎದುರಾಗಲಿದೆ. ವಿದೇಶದಿಂದ ಬರುವ ಅಡಿಕೆಗೆ ಕಸ್ಟಮ್ಸ್ ಸುಂಕ ತಪ್ಪಿಸಲು ಹುರಿದ ಅಡಿಕೆ ಎಂದು ನಮೂದಿಸಿ ಭಾರತಕ್ಕೆ ತರಲಾಗುತ್ತಿದೆ ಎಂದು ದೇಶೀಯ ಅಡಿಕೆ ಬೆಳೆಗಾರರು ದೂರಿದ್ದಾರೆ. ವಿದೇಶಿ ಅಡಿಕೆಗಳು ಸುಂಕ ತಪ್ಪಿಸಿ ಅಮದು ಮಾಡುವುದನ್ನು ನಿಲ್ಲಿಸದಿದ್ದರೆ ಕರ್ನಾಟಕವೂ ಸೇರಿದಂತೆ ದೇಶದ ಅಡಿಕೆ ಬೆಳೆಗಾರರ ಬೆಲೆ ಕುಸಿದು ಅಡಿಕೆ ಬೆಳೆಗಾರರಿಗೆ ಬಾರಿ ಆರ್ಥಿಕ ನಷ್ಟ ಆಗಲಿದೆ ಎಂದರು.
ವಿದೇಶಿ ಅಡಿಕೆಗಳು ಚಾಲಿ ಮತ್ತು ರಾಶಿಯಂತಹ ಪ್ರಭೇದಗಳೊಂದಿಗೆ ಕಳಪೆ ಅಡಿಕೆ ಬೆರೆಸಿ ಮಾರುಕಟ್ಟೆಗೆ ಬರುತ್ತಿರು ವುದು ಅಡಿಕೆಯ ಗುಣಮಟ್ಟದ ಖ್ಯಾತಿಗೆ ಕಳಂಕ ತರಲಿದೆ. ಈ ಹಿನ್ನೆಲೆಯಲ್ಲಿ ಸಿಬಿಐಸಿ ಲೆಕ್ಕಪರಿಶೋಧನೆ ಯೊಂದಿಗೆ ಅಡಿಕೆ ಆಮದಿನ ಬಗ್ಗೆ ಕಟ್ಟುನಿಟಿನ ಕ್ರಮ ಜರುಗಿಸಬೇಕೆಂದು ಸಂಸದ ಕೋಟ ತನ್ನ ಪ್ರಸ್ತಾಪನೆಯಲ್ಲಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.




