ಉಡುಪಿ ಜಿಲ್ಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಕೊನೆಯ ಹಂತಕ್ಕೆ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ, ಆ.5: ಜಿಲ್ಲೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದ್ದು ಈವರೆಗೆ ಜಿಲ್ಲೆಯ ಒಟ್ಟು 10,63,876 ಮತದಾರರಲ್ಲಿ ಒಟ್ಟು 9,99,534 ಮಂದಿಯ ಗಣತಿ ನಮೂನೆಯನ್ನು ಡಿಜಿಟಲೀಕರಣ ಗೊಳಿಸಿ ಶೇ.93.95ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಹೇಳಿದ್ದಾರೆ.
ಬುಧವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ರಾಜಕೀಯ ಪಕ್ಷಗಳ ವತಿಯಿಂದ ಕೈಗೊಳ್ಳಬೇಕಾದ ಕ್ರಮದ ಕುರಿತಂತೆ ಚರ್ಚಿಸಲು ಕರೆದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ 21,186 ಮತದಾರರು ಮೃತಪಟ್ಟಿರುವುದು ಮನೆ ಭೇಟಿಯ ವೇಳೆ ಕಂಡುಬಂದಿದೆ. ಅಲ್ಲದೇ ಗೈರು, ಸ್ಥಳಾಂತರ, ಮರಣ ಹಾಗೂ ದ್ವಿಪ್ರತಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 64,328 ಮಂದಿ ಮತದಾರರನ್ನು ಗುರುತಿಸಲಾಗಿದೆ. ಇದರಲ್ಲಿ 29,756 ಶಾಶ್ವತ ವಲಸೆ, 8,250 ದ್ವಿಪ್ರತಿ ಗಳು, 4933 ಮಂದಿ ಗೈರು, ಇತರ 203 ಸೇರಿವೆ ಎಂದವರು ವಿವರಿಸಿದರು.
ಮತಗಟ್ಟೆಗಳ ಸಂಖ್ಯೆ ಹೆಚ್ಚಳ: ಈ ಹಿಂದೆ ಜಿಲ್ಲೆಯಲ್ಲಿ ಒಟ್ಟು 1,112 ಮತಗಟ್ಟೆಗಳಿದ್ದು, ಹೊಸದಾಗಿ 131 ಮತಗಟ್ಟೆ ಗಳನ್ನು ಸೃಜನಿಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 1243 ಮತಗಟ್ಟೆಗಳು ಇರಲಿವೆ ಎಂದ ಅವರು, ಮತದಾರರಿಗೆ 2 ಕಿ.ಮೀ. ಒಳಗೆ ಮತಗಟ್ಟೆಗಳು ಇರುವ ಹಾಗೆ ಮತದಾರರ ಪಟ್ಟಿಯನ್ನು ಸೃಜಿಸಲಾಗುವುದು ಎಂದರು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಶೇಕಡಾ ನೂರರಷ್ಟು ಪೂರ್ಣಗೊಂಡ ಮತದಾರರ ಪಟ್ಟಿಯನ್ನು ಪರಿಶೀಲಿಸಿ ನಿರ್ದಿಷ್ಟ ಮತಗಟ್ಟೆ ಪಟ್ಟಿಯಲ್ಲಿ ಯಾವುದೇ ಹೆಸರು ಸೇರ್ಪಡೆ ಅಥವಾ ಬದಲಾವಣೆ ಗಳಿದ್ದಲ್ಲಿ ಸಂಬಂಧಪಟ್ಟ ಬೂತ್ ಮಟ್ಟದ ಅಧಿಕಾರಿಯಲ್ಲಿ ಹಾಗೂ ಮತದಾರರ ನೋಂದಣಿ ಅಧಿಕಾರಿಯವರ ಗಮನಕ್ಕೆ ಆಗಸ್ಟ್ 8ರ ಒಳಗೆ ತರಬಹುದಾಗಿದೆ ಎಂದರು.
ಮನೆ ಮನೆಗೆ ತೆರಳಿ ಎನ್ಯೂಮರೇಷನ್ ನಮೂನೆಗಳಿಗೆ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆ ಆಗಸ್ಟ್ 8ರವರೆಗೆ ನಡೆಯಲಿದೆ. ಇದುವರೆಗೆ ನಮೂನೆಗಳನ್ನು ಭರ್ತಿ ಮಾಡದ ನಾಗರಿಕರು ಕೂಡಲೇ ಭರ್ತಿ ಮಾಡಿ ಸಂಬಂಧಿಸಿದ ಬಿಎಲ್‌ಒಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದರು.
ರಾಜಕೀಯ ಪಕ್ಷಗಳ ಮುಖಂಡರು ಮಾತನಾಡಿ, ಒಂದೇ ಕುಟುಂಬದ ಸದಸ್ಯರ ಮತದಾರರು ಒಂದೇ ಕಡೆ ವಾಸವಿ ದ್ದರೂ ಅವರ ಹೆಸರುಗಳು ಬೇರೆ ಬೇರೆ ಕಡೆಗಳಲ್ಲಿ ಇವೆ. ಅವರಲ್ಲಿ ಕೆಲವು ಕುಟುಂಬ ಸದಸ್ಯರ ಹೆಸರುಗಳು ಪಕ್ಕದ ವಾರ್ಡಿನ ಪಟ್ಟಿಗೆ ಸೇರಿರುತ್ತದೆ. ಇದರಿಂದ ಅನಾನುಕೂಲವಾಗುತ್ತದೆ. ಸಾಧ್ಯವಾದಷ್ಟು ಕುಟುಂಬ ಸದಸ್ಯರು ಒಂದೆಡೆ ಇರುವಂತೆ ಆಗಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ವಿವಿಧ ಪಕ್ಷಗಳ ಮುಖಂಡರಾದ ಕಾಂಗ್ರೆಸ್‌ನ ಹಬೀಬ್ ಅಲಿ, ಜೆಡಿಎಸ್‌ನ ಜಯರಾಮ್ ಆಚಾರ್ಯ ಹಾಗೂ ಜಗದೀಶ್ ಆಚಾರ್ಯ, ಭಾರತೀಯ ಜನತಾ ಪಕ್ಷದ ಚಂದ್ರಶೇಖರ ಪ್ರಭು ಹಾಗೂ ಶ್ರೀಕಾಂತ್ ನಾಯಕ್ ಮತ್ತಿತರರು ಉಪಸ್ಥಿತ ರಿದ್ದರು.
ಜಿಲ್ಲೆಯಲ್ಲಿ 64,328 ಹೆಸರು ಮತದಾರ ಪಟ್ಟಿಯಿಂದ ಹೊರಗೆ
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಉಡುಪಿ ಜಿಲ್ಲೆಯಲ್ಲಿರುವ 10,63,876 ಮತದಾರರ ಪೈಕಿ 9,99,534 ಮಂದಿಯ ಗಣತಿ ನಮೂನೆ ಇಂದು ಸಂಜೆಯವರೆಗೆ ಡಿಜಿಟಲೀಕರಣಗೊಂಡಿದ್ದು, ಇನ್ನು ಕೇವಲ 14 ಮಂದಿಯ ಗಣತಿ ನಮೂನೆ ಡಿಜಿಟಲೀಕರಣಗೊಳ್ಳಬೇಕಿದೆ. ಮೃತರೂ ಸೇರಿದಂತೆ ವಿವಿಧ ಕಾರಣಗಳಿಂದ ಒಟ್ಟು 64,328 ಮಂದಿಯ ಹೆಸರು ಮತದಾರರ ಪಟ್ಟಿಯಿಂದ ಕೈಬಿಡಲ್ಪಟ್ಟಿದೆ ಎಂಬುದು ರಾಜ್ಯ ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಡಿಜಟಲೀಕರಣದಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಇಲ್ಲಿ ಶೇ.93.95ರಷ್ಟು ನಮೂನೆಗಳ ಡಿಜಟಲೀಕರಣ ಪೂರ್ಣಗೊಂಡಿದೆ. ಶೇ.6.05ರಷ್ಟು ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾ ಗಿದೆ. ಇದು ಸಹ ರಾಜ್ಯದಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಾಗಿದೆ. ರಾಜ್ಯದಲ್ಲಿ ಶೇ.20.02 ಅಂದರೆ 1,10,97,426 ಮಂದಿಯ ಹೆಸರನ್ನು ವಿವಿಧ ಕಾರಣಗಳಿಗಾಗಿ ಕೈಬಿಡಲಾಗಿದೆ.
ಉಡುಪಿ ಜಿಲ್ಲೆಯಲ್ಲಿ 35,243 (ಶೇ.3.31) ಮಂದಿಯ ಮ್ಯಾಪಿಂಗ್ ಆಗಿಲ್ಲ. 4,68,658 (ಶೇ.44.05) ಮಂದಿಯ ಮ್ಯಾಪಿಂಗ್ ಸ್ವಯಂ ಆಗಿದೆ. ಉಳಿದಂತೆ 4,95,539 ಮಂದಿಯ ಮ್ಯಾಪಿಂಗ್ (ಶೇ.46.58) ಅವರ ವಂಶಸ್ಥರ (ತಂದೆ, ತಾಯಿ, ಅಜ್ಜ, ಅಜ್ಜಿ) ಮೂಲಕ ಆಗಿದೆ ಎಂದು ಆಯೋಗದ ಮಾಹಿತಿ ತಿಳಿಸಿದೆ.
ರಾಜ್ಯದಲ್ಲಿ ಒಟ್ಟಾರೆಯಾಗಿ 34,16,584 (ಶೇ.6.16) ಮಂದಿಯ ಮ್ಯಾಪಿಂಗ್ ಆಗಿಲ್ಲ ಎಂದು ಆಯೋಗದ ಮಾಹಿತಿ ತಿಳಿಸಿದೆ.






