ಕಲ್ಮಾಡಿ ಚರ್ಚ್ ವಾರ್ಷಿಕ ಮಹೋತ್ಸವದ ನವದಿನಗಳ ನೊವೆನಾ ಪ್ರಾರ್ಥನೆಗೆ ಚಾಲನೆ

ಮಲ್ಪೆ, ಆ.6: ಕಲ್ಮಾಡಿಯಲ್ಲಿರುವ ಸ್ಟೆಲ್ಲಾ ಮಾರಿಸ್ ದೇವಾಲಯದ ವೆಲಂಕಣಿ ಆರೋಗ್ಯ ಮಾತೆಯ ಪುಣ್ಯಕ್ಷೇತ್ರ ಪ್ರತಿಷ್ಠಾಪನೆಯ ವಾರ್ಷಿಕ ಮಹೋತ್ಸವದ ಪ್ರಯುಕ್ತ ಪೂರ್ವಭಾವಿಯಾಗಿ ಒಂಬತ್ತು ದಿನಗಳ ನೊವೆನಾ ಪ್ರಾರ್ಥನೆಗೆ ಗುರುವಾರ ಸಂಜೆ ಚಾಲನೆ ನೀಡಲಾಯಿತು.
‘ಆತ ಹೇಳಿದಂತೆ ಮಾಡಿ’ ಹಬ್ಬದ ಸಂದೇಶವಾಗಿದ್ದು, ಪೂರ್ವ ಸಿದ್ದತೆಯಾಗಿ 9 ದಿನಗಳ ನವೇನಾ ಪ್ರಾರ್ಥನೆಗೆ ಉಡುಪಿ ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಧ್ವಜಾರೋಹಣದ ಮೂಲಕ ಚಾಲನೆ ನೀಡಿ ಪವಿತ್ರ ಬಲಿಪೂಜೆಯನ್ನು ಅರ್ಪಿಸಿದರು.
ಬಳಿಕ ಅವರು ಪ್ರವಚನದಲ್ಲಿ ಸಂದೇಶವನ್ನು ನೀಡಿ, ಕ್ರೈಸ್ತ ವಿಶ್ವಾಸಿಗಳು ತಮ್ಮ ಉತ್ತಮ ನಡೆ, ಪ್ರೀತಿ, ಮತ್ತು ಸಹಾಯದ ಹಸ್ತದ ಮೂಲಕ ಕ್ರಿಸ್ತನ ಬೆಳಕನ್ನು ಜಗತ್ತಿಗೆ ತೋರಿಸಬೇಕಾಗಿದೆ. ಕ್ರೈಸ್ತ ನಂಬಿಕೆಯಲ್ಲಿ ಶಿಲುಬೆಯು ಮಾನವ ಜೀವನದ ಕೊನೆಯಲ್ಲ, ಬದಲಿಗೆ ಹೊಸ ಜೀವನದ ಮತ್ತು ಪುನರುತ್ಥಾನದ ಆರಂಭವಾಗಿದೆ. ಶಿಲುಬೆಯು ಯೇಸುಕ್ರಿಸ್ತನ ತ್ಯಾಗ, ಕ್ಷಮೆ ಮತ್ತು ಅನಾದಿ ಪ್ರೀತಿಯ ಸಂಕೇತವಾಗಿದೆ. ಇದು ಕಷ್ಟಗಳ ಅಂತ್ಯವಲ್ಲ, ಬದಲಿಗೆ ನಂಬಿಕೆಯ ಹೊಸ ದಾರಿಯಾಗಿದೆ ಎಂದರು.
ಪವಿತ್ರ ಬಲಿಪೂಜೆಯಲ್ಲಿ ವೇಳೆ ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ರೆಕ್ಟರ್ ವಂ.ಡಾ.ಬ್ಯಾಪ್ಟಿಸ್ಟ್ ಮಿನೇಜಸ್, ಬ್ರಹ್ಮಾವರ ಚರ್ಚಿನ ಧರ್ಮಗುರು ವಂ. ಜೋನ್ ಫೆರ್ನಾಂಡಿಸ್, ಚರ್ಚಿನ ಪಾಲನಾ ಮಂಡಳಿ ಉಪಾಧ್ಯಕ್ಷ ನವೀನ್ ಫೆರ್ನಾಂಡಿಸ್, ಕಾರ್ಯದರ್ಶಿ ಪ್ರೆಸಿಲ್ಲಾ ಆಳ್ವಾ, ಆಯೋಗಗಳ ಸಂಯೋಜಕ ಡೆನಿಸ್ ಲಸ್ರಾದೊ ಹಾಗೂ ಚರ್ಚಿನ ಮಹೋತ್ಸವ ಆಚರಣಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
9 ದಿನಗಳ ನವೇನಾ ಪ್ರಾರ್ಥನೆಯಲ್ಲಿ ಭಕ್ತಾದಿಗಳಿಗಾಗಿ, ದಂಪತಿಗಳಿಗಾಗಿ, ದಾನಿಗಳಿಗಾಗಿ, ಯುವಜನರಿಗಾಗಿ, ಯಾಜಕರು ಮತ್ತು ಧಾರ್ಮಿಕರಿಗಾಗಿ, ವಯೋವೃದ್ಧರಿಗಾಗಿ, ರೋಗಿಗಳಿಗಾಗಿ, ಕುಟುಂಬಗಳಿಗಾಗಿ ವಿಶೇಷ ಪ್ರಾರ್ಥನೆ ಯನ್ನು ಸಲ್ಲಿಸಲಾಗುತ್ತದೆ. ಆ.13ರಂದು ಗುರುವಾರ ಮಧ್ಯಾಹ್ನ ಆದಿ ಉಡುಪಿ ಜಂಕ್ಷನ್ ನಿಂದ ಚರ್ಚಿನ ತನಕ ವೆಲಂಕಣಿ ಮಾತೆಯ ಸ್ವರೂಪದ ಮೆರವಣಿಗೆ ನಡೆಯಲಿದೆ. ಆ.15ರ ಬೆಳಗ್ಗೆ 10.30ಕ್ಕೆ ದಿವ್ಯ ಬಲಿಪೂಜೆ ಯನ್ನು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಪರಮಪೂಜ್ಯ ಲೆಸ್ಲಿ ಕ್ಲಿಫರ್ಡ್ ಡಿ’ಸೋಜ ನೆರೆವೇರಿಸಲಿದ್ದಾರೆ.






