ಡೇವಿಡ್ ಡಿಸೋಜ ಅಂತ್ಯಸಂಸ್ಕಾರ: ನೂರಾರು ಮಂದಿ ಭಾಗಿ

ಪಡುಬಿದ್ರಿ, ಆ.9: ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜ ಅವರ ಅಂತ್ಯಸಂಸ್ಕಾರ ರವಿವಾರ ಮುದರಂಗಡಿ ಪಿಲಾರು ಚರ್ಚ್‌ನಲ್ಲಿ ನಡೆಯಿತು.
ಮಣಿಪಾಲದಲ್ಲಿ ಇರಿಸಲಾಗಿದ್ದ ಪಾರ್ಥಿವ ಶರೀರವನ್ನು ಕಾಪುವಿನ ರಾಜೀವ ಭವನಕ್ಕೆ ತರಲಾಯಿತು. ಅಲ್ಲಿ ಸೇರಿದ್ದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಅಂತಿಮ ದರ್ಶನ ಪಡೆದರು. ಬಳಿಕ ಪಾರ್ಥಿವ ಶರೀರವನ್ನು ವಾಹನದಲ್ಲಿ ಮರೆವಣಿಗೆಯ ಮೂಲಕ ಕಟಪಾಡಿ-ಶಿರ್ವ ಮೂಲಕ ಮುದರಂಗಡಿ ಗ್ರಾಪಂ ಕಚೇರಿ, ಪಿಲಾರು ಕುಂಜಿಗುಡ್ಡೆ ಕಾಲೋನಿ ಹಾಗೂ ಅವರ ಮನೆಗೆ ಕೊಂಡೊಯ್ಯಲಾಯಿತು.
ನಂತರ ಪಿಲಾರು ಚರ್ಚ್‌ನಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಸೇರಿದ ಜನರು ಡೇವಿಡ್ ಡಿಸೋಜ ಅವರ ಅಂತಿಮ ದರ್ಶನ ಪಡೆದರು. ಚರ್ಚ್‌ನಲ್ಲಿ ನಡೆದ ಅಂತಿಮ ವಿಧಿವಿಧಾನ ಗಳ ಬಳಿಕ ಅಂತ್ಯಸಅಸ್ಕಾರ ನೆರವೇರಿಸಲಾಯಿತು.
ಮುದರಂಗಡಿ ಬಂದ್: ಡೇವಿಡ್ ಡಿಸೋಜ ಅವರ ಅಂತ್ಯಸಂಸ್ಕಾರದ ಹಿನ್ನೆಲೆಯಲ್ಲಿ ರವಿವಾರ ಬೆಳಗ್ಗೆಯಿಂದಲೇ ಮುದರಂಗಡಿ ಪೇಟೆ ಸಂಪೂರ್ಣ ಬಂದ್ ಆಗಿತ್ತು. ಅಂಗಡಿ-ಮುಂಗಟ್ಟುಗಳು, ಆಟೊ ಹಾಗೂ ಟೆಂಪೊ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಡೇವಿಡ್ ಡಿಸೋಜ ಅವರ ಕುಟುಂಬಸ್ಥರು, ಹಿತೈಷಿಗಳು ಹಾಗೂ ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಡೇವಿಡ್ ಡಿಸೋಜ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಮೂವರನ್ನು ಬಂಧಿಸಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪ್ರಕರಣದಲ್ಲಿ ಸ್ಥಳೀಯರ ಕೈವಾಡದ ಶಂಕೆಯೂ ವ್ಯಕ್ತವಾಗಿದ್ದು, ಸದ್ಯದಲ್ಲೇ ಸಮಗ್ರ ಮಾಹಿತಿ ಲಭ್ಯವಾಗಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಡೇವಿಡ್ ಅವರು ತಮ್ಮ ಆತ್ಮೀಯ ಗೆಳೆಯರಾಗಿದ್ದರು. ವ್ಯವಹಾರದ ಜೊತೆಗೆ ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದ ಅವರು ಸರ್ವಧರ್ಮೀಯರ ಗೌರವಕ್ಕೆ ಪಾತ್ರರಾಗಿದ್ದರು. ಡೇವಿಡ್ ಅವರ ಸಾವು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮೊದಲಾದವರು ಹಾಜರಿದ್ದರು.






