ವಿದೇಶದಿಂದ ಅಕ್ರಮವಾಗಿ ಅಡಿಕೆ ಆಮದು; ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಿದ ಸಂಸದರ ತಂಡ

ಉಡುಪಿ, ಆ.9: ಭಾರತ ದೇಶಕ್ಕೆ ವಿದೇಶಗಳಿಂದ ಅಕ್ರಮವಾಗಿ ಕಳಪೆ ಗುಣಮಟ್ಟದ ಅಡಿಕೆ ಆಮದಾಗುತ್ತಿದ್ದು, ವಿದೇಶ ಅಡಿಕೆ ಕಳ್ಳ ಸಾಗಣೆಯನ್ನು ತಡೆಗಟ್ಟಿ ಅಡಿಕೆ ಬೆಳೆಗಾರರನ್ನು ರಕ್ಷಿಸಬೇಕೆಂದು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಬಿ.ವೈ.ರಾಘವೇಂದ್ರ, ವಿಶ್ವೇಶ್ವರ ಹೆಗ್ಡೆ ಕಾಗೇರಿ ನೇತೃತ್ವದ ತಂಡ ಕೇಂದ್ರ ಗ್ರಹ ಸಚಿವ ಅಮಿತ್ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರನ್ನು ಪಾರ್ಲಿಮೆಂಟಿನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿತು.
ವಿದೇಶಿಗಳಿಂದ ಅದರಲ್ಲೂ ಇಂಡೋನೇಷ್ಯಾ, ಬಾಂಗ್ಲಾದೇಶ, ಮಯನ್ಮಾರ್ ಮುಂತಾದ ದೇಶಗಳಿಂದ ಸಮುದ್ರ ಮೂಲಕ ಅಕ್ರಮ ಸರಕು ಸರಬರಾಜಾಗುತ್ತಿದ್ದು, ಕೆಲವೆಡೆ ನೆರೆಯ ದೇಶಗಳಿಂದ ಕಳಪೆ ಅಡಿಕೆ ತಂದು ದೇಶಿಯ ಉತ್ಪನ್ನಗಳೊಂದಿಗೆ ಬೆರೆಸಿ ಮಾರಾಟ ಮಾಡುವ ಪ್ರಕರಣಗಳೂ ಬೆಳಕಿಗೆ ಬಂದಿವೆ.
ಭಾರತ ದೇಶದ ಕರ್ನಾಟಕ, ಕೇರಳ, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಲ್ಲಿ ಲಕ್ಷಾಂತರ ಮಂದಿ ಅಡಿಕೆ ಬೆಳೆಗಾರರು ಅಕ್ರಮ ಅಡಿಕೆ ಆಮದಿನಿಂದ ಸಂಕಷ್ಟ ಅನುಭವಿಸುವಂತಾಗಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆಯ ಮೂಲಕ ಅಕ್ರಮ ಅಡಿಕೆಯನ್ನು ನಿಯಂತ್ರಿಸಬೇಕಾದ ಅನಿವಾರ್ಯತೆ ಇದೆ ಎಂದು ಸಂಸದರು ಗೃಹ ಸಚಿವರಿಗೆ ಮನವರಿಕೆ ಮಾಡಿದರು. ಇದೇ ಸಂದರ್ಭದಲ್ಲಿ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರನ್ನು ಭೇಟಿ ಮಾಡಿ ಅಡಿಕೆ ಬೆಳೆಗೆ ಬಳಸುವ ಕ್ರಿಮಿನಾಶಕ, ಮೈಲುತುತ್ತಿಗೆ ಪ್ರಸ್ತುತ ಶೇ.18ರಷ್ಟು ಜಿಎಸ್ಟಿ ವಿಧಿಸುತ್ತಿದ್ದು, ಅಡಿಕೆ ಬೆಳೆ ಕೃಷಿ ವ್ಯಾಪ್ತಿಯೊಳಗೆ ಬರುವುದರಿಂದ ಜಿಎಸ್ಟಿ ಶೇ.5ಕ್ಕೆ ಇಳಿಕೆ ಮಾಡಿ ಅಡಿಕೆ ಬೆಳೆಗಾರರ ರಕ್ಷಣೆಗೆ ಬರಬೇಕೆಂದು ಸಂಸದರ ತಂಡ ಮನವಿ ಸಲ್ಲಿಸಿತು.
ಗೃಹ ಸಚಿವ ಅಮಿತ್ ಶಾ ಮತ್ತು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಮನವಿಗೆ ಸ್ಪಂದಿಸಿ ಅಕ್ರಮ ಅಡಿಕೆ ಯನ್ನು ತಡೆಗಟ್ಟುವುದು ಮತ್ತು ಮೈಲುತುತ್ತಿಗೆ ಜಿ.ಎಸ್.ಟಿ ಇಳಿಕೆ ಬಗ್ಗೆ ಕ್ರಮ ಜರುಗಿಸುವುದಾಗಿ ತಿಳಿಸಿದರು. ಸಂಸದರ ತಂಡದಲ್ಲಿ ಶಾಸಕ ಅರಗ ಜ್ಞಾನೇಂದ್ರ, ಕ್ಯಾಂಪ್ರೋ ಸಂಸ್ಥೆಯ ಅಧ್ಯಕ್ಷ ಸತೀಶ್ಚಂದ್ರ, ವ್ಯವಸ್ಥಾಪಕ ನಿರ್ದೇಶಕ ಸತ್ಯನಾರಾಯಣ ಮುಂತಾದವರಿದ್ದರು.






