ಕೇಂದ್ರ ಸರಕಾರದ ನೀತಿಗಳ ವಿರುದ್ಧ ಜೈಲ್ ಭರೋ ಪ್ರತಿಭಟನೆ

ಕುಂದಾಪುರ, ಆ.10: ಕೇಂದ್ರ ಸರಕಾರದ ನೀತಿಗಳ ವಿರುದ್ಧ ಜೈಲ್ ಭರೋ ಹೋರಾಟದ ಅಂಗವಾಗಿ ಕುಂದಾಪುರ ಅಂಚೆ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರಕಾರ ಜಾರಿಗೆ ತಂದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಾಪಸ್ ಪಡೆಯಬೇಕು, ವಿಬಿಜಿ ಗ್ರಾಮ್ ಜಿ ಯೋಜನೆಯನ್ನು ರದ್ದುಪಡಿಸಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಪುನರ್ ಸ್ಥಾಪಿಸಬೇಕು, ಗ್ರಾಮೀಣ ಬಡವರ ಹಿತ ಕಾಪಾಡಲು ಹಿಂದಿನಂತೆ ಶೇ.90ರಷ್ಟು ಕೇಂದ್ರ ಅನುದಾನ ಮುಂದುವರಿಸಬೇಕು ಹಾಗೂ ರೈತರ ಕೃಷಿ ಉತ್ಪನ್ನಗಳಿಗೆ ಸಮರ್ಪಕ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಅಂಚೆ ಕಚೇರಿಗೆ ಮುತ್ತಿಗೆ ಹಾಕಿ ಕೇಂದ್ರ ಸರ್ಕಾರದ ಕಾರ್ಮಿಕ, ರೈತ ಹಾಗೂ ಗ್ರಾಮೀಣ ಕೂಲಿಕಾರರ ವಿರೋಧಿ ನೀತಿಗಳನ್ನು ಖಂಡಿಸಲಾಯಿತು. ಮುತ್ತಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತರು, ಕೂಲಿಕಾರರು ಹಾಗೂ ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.
ಸಿಐಟಿಯು ಮುಖಂಡರಾದ ಎಚ್.ನರಸಿಂಹ, ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘದ ಅಧ್ಯಕ್ಷ ವಿ.ನರಸಿಂಹ, ಕೃಷಿಕೂಲಿಕಾರರ ಸಂಘದ ನಾಯಕಿ ನಾಗರತ್ನ ನಾಡ, ಕಟ್ಟಡ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿದರು.
ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ಶೀಲಾವತಿ, ಸಿಐಟಿಯು ಮುಖಂಡರಾದ ಮಹಾಬಲ ವಡೇರ ಹೋಬಳಿ, ಬಲ್ಕೀಸ್, ಹಂಚು ಕಾರ್ಮಿಕರ ಮುಖಂಡರಾದ ಸುರೇಂದ್ರ ಎಚ್., ಪಂಜು ಪೂಜಾರಿ, ಚಂದ್ರ ಪೂಜಾರಿ, ಕಟ್ಟಡ ಕಾರ್ಮಿಕರ ಮುಖಂಡ ಸಂತೋಷ್ ಹೆಮ್ಮಾಡಿ ಮೊದಲಾದವರಿದ್ದರು.






