ಕಸ್ತೂರಿ ರಂಗನ್ ವರದಿ ಜಾರಿಗೆ ಕರಡು ಅಧಿಸೂಚನೆ: ಸಮಾಲೋಚನಾ ಸಭೆ

ಕುಂದಾಪುರ, ಆ.10: ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಜಾರಿಯಾಗಲಿ ರುವ ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ 7ನೇ ಕರಡು ಅಧಿಸೂಚನೆ ಪ್ರಕಟಿಸಿದ್ದು, ಅದರ ಕುರಿತಾಗಿ ಚರ್ಚಿಸಲು ಸೋಮವಾರ ಕುಂದಾಪುರದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಸಮಾಲೋಚನಾ ಸಭೆ ನಡೆಯಿತು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಕಸ್ತೂರಿ ರಂಗನ್ ಸಮಿತಿಯ ವರದಿ ಜಾರಿಯ 7ನೇ ಅಧಿಸೂಚನ 60 ದಿನದ ಆಕ್ಷೇಪಣೆ ನೀಡಿದೆ. ಈ ಹಿಂದೆ 6 ಬಾರಿ ಅಧಿಸೂಚನೆ ಹೊರಡಿಸಿದಾಗ ಅನುಷ್ಠಾನ ಸಾಧ್ಯ ವಿಲ್ಲ ಎಂಬುದಾಗಿ ರಾಜ್ಯ ಸರಕಾರ ತಿರಸ್ಕರಿಸಿದೆ. ವರದಿಯ ಅಂಶಗಳು ಏನು ಅನ್ನುವುದರ ಕುರಿತು, ಸಭೆಯಲ್ಲಿ ಚರ್ಚಿಸಲಾಯಿತು ಎಂದರು.
ಯಾರಲ್ಲಿಯೂ ಇದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಆ ಕಾರಣಕ್ಕೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ನೇತೃತ್ವ ದಲ್ಲಿ ಎಲ್ಲ ಶಾಸಕರನ್ನು ಒಳಗೊಂಡು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಅಲ್ಲಿ ಯಾವ ರೀತಿಯ ಹೋರಾಟ ಕೈಗೊಳ್ಳಬಹುದು ಎಂಬುದನ್ನ್ನು ತೀರ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಕೇರಳದಲ್ಲಿ ಈ ವರದಿ ಜಾರಿಯ ಅನುಷ್ಠಾನ ಆಗದಂತೆ, ಕೆಲವೊಂದು ಪ್ರದೇಶಗಳಿಗೆ ವಿನಾಯಿತಿ ನೀಡುವಂತೆ ವ್ಯವಸ್ಥಿತ ತಯಾರಿಗಳು ನಡೆದಿದೆ. ಭೌತಿಕ ಸರ್ವೇ ಕೂಡ ಕೆಲವೇ ತಿಂಗಳಲ್ಲಿ ಮಾಡಿದ್ದಾರೆ. ಅದರ ಆಧಾರದ ಮೇಲೆ ಗ್ರಾಮಗಳನ್ನು ಕೈಬಿಡದಿದ್ದರೂ, ಕೆಲವು ಪ್ರದೇಶಗಳು ಕಡಿಮೆಯಾಗಿವೆ. ನಮ್ಮಲ್ಲೂ ಆ ಪ್ರಕ್ರಿಯೆ ಆಗಬೇಕಾಗಿದೆ. ಈ ಬಗ್ಗೆ ಕೆಲವೊಂದು ವಿಚಾರಗಳನ್ನು ಚರ್ಚಿಸಲಾಗಿದೆ. ಮುಂದಿನ ಹಂತದಲ್ಲಿ ಯಾವ ರೀತಿಯಲ್ಲಿ ಆಕ್ಷೇಪಣೆ ಸಲ್ಲಿಸಬಹುದು ಎಂಬುದರ ಬಗ್ಗೆ ನಿರ್ಧರಿಸಲಾಗುವುದು ಎಂದರು.
ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರನ್ ಪಿ., ಈ 7ನೇ ಅಧಿಸೂಚನೆಯ ಕುರಿತಾಗಿ, ಪರಿಸರ ಸೂಕ್ಷ್ಮ ಪ್ರದೇಶ ಹಾಗೂ ಪರಿಸರ ಸೂಕ್ಷ್ಮ ವಲಯಕ್ಕಿರುವ ವ್ಯತ್ಯಾಸಗಳ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್., ವನ್ಯಜೀವಿ ವಿಭಾಗದ ಎಸಿಎಫ್ ದಿನೇಶ್, ವಿವಿಧ ಉಪ ವಲಯ ಅರಣ್ಯಾಧಿಕಾರಿಗಳು, ಕುಂದಾಪುರ ತಾಪಂ ಕಾರ್ಯ ನಿರ್ವಹಣಾಧಿಕಾರಿ ಮಹೇಶ್ ಕೆ.ಜಿ., ಬೈಂದೂರು ತಹಶಲ್ದಾರ್ ರವಿ ದೀಕ್ಷಿತ್, ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಗ್ರಾಮಗಳ ಪ್ರಮುಖರು, ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮಸ್ಥರು ಪಾಲ್ಗೊಂಡಿದ್ದರು.






