ರಾಜ್ಯ ಕರಾವಳಿ ಮೀನುಗಾರರಿಗೆ ಪ್ರತ್ಯೇಕ ಸೀಮೆಎಣ್ಣೆ ಹಂಚಿಕೆಗೆ ಕೋರಿಕೆ: ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಭೇಟಿಯಾದ ಸಂಸದರು

ಹೊಸದಿಲ್ಲಿ, ಆ.11: ಕರ್ನಾಟಕದ ಸಾಂಪ್ರದಾಯಿಕ ಯಾಂತ್ರೀಕೃತ ಮೀನುಗಾರಿಕಾ ಕ್ಷೇತ್ರಕ್ಕೆ 2026-27ನೇ ಸಾಲಿನಲ್ಲಿ 24,090 ಕಿ.ಲೀಟರ್ (ಕೆಎಲ್) ಸಬ್ಸಿಡಿ ರಹಿತ ಸೀಮೆಎಣ್ಣೆಯನ್ನು ಪ್ರತ್ಯೇಕವಾಗಿ ಹಂಚಿಕೆ ಮಾಡುವಂತೆ ಶಿವಮೊಗ್ಗ ಕ್ಷೇತ್ರದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ನೇತೃತ್ವದ ಸಂಸದರ ನಿಯೋಗ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರಲ್ಲಿ ಮನವಿ ಮಾಡಿದೆ.
ಕರ್ನಾಟಕದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಸಾಂಪ್ರದಾಯಿಕ ಮೀನುಗಾರರು ಎದುರಿಸು ತ್ತಿರುವ ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವರ ಗಮನ ಸೆಳೆದ ಸಂಸದ ರಾಘವೇಂದ್ರ, ತಮ್ಮ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬೈಂದೂರು ಸೇರಿದಂತೆ ಕರಾವಳಿ ಭಾಗದ ಸಾವಿರಾರು ಕುಟುಂಬಗಳಿಗೆ ಮೀನುಗಾರಿಕೆಯೇ ಪ್ರಮುಖ ಜೀವನಾಧಾರವಾಗಿದ್ದು, ಸೀಮೆಎಣ್ಣೆಯ ಬೆಲೆ ಏರಿಕೆಯಿಂದಾಗಿ ಮೀನುಗಾರಿಕೆ ನಡೆಸುವುದು ದಿನದಿಂದ ದಿನಕ್ಕೆ ದುಸ್ತರವಾಗುತ್ತಿದೆ ಎಂದು ತಿಳಿಸಿದರು.
ಮೀನುಗಾರರಿಗೆ ಸಂಕಷ್ಟ: ಸಾಂಪ್ರದಾಯಿಕ ಮೀನುಗಾರರು ಬಳಸುವ ಕೈಗಾರಿಕಾ ಸೀಮೆಎಣ್ಣೆಯ ಬೆಲೆ ಪ್ರತಿ ಲೀಟರ್‌ಗೆ ಸುಮಾರು 64 ರೂ.ನಿಂದ 152 ರೂ.ಗಳಿಗೆ ಏರಿಕೆಯಾಗಿದೆ. ಕರ್ನಾಟಕ ಸರಕಾರ ಪ್ರತಿ ಲೀಟರ್‌ಗೆ 35 ರೂ. ಸಬ್ಸಿಡಿ ನೀಡುತ್ತಿದ್ದರೂ, ಮೀನುಗಾರರು ಪ್ರತಿ ಲೀಟರ್‌ಗೆ 117 ರೂ. ಗಳಿಗೂ ಹೆಚ್ಚು ತೆರಬೇಕಾಗಿದೆ. ಪ್ರಸಕ್ತ ಸೀಮೆಎಣ್ಣೆ ಬೆಲೆ 160 ರೂ.ಗಳಿಗೂ ಹೆಚ್ಚಾಗಿರುವ ಸಂದರ್ಭದಲ್ಲಿ, ರಾಜ್ಯದ ಸಬ್ಸಿಡಿ ಬಳಿಕವೂ ಮೀನುಗಾರರ ಮೇಲೆ ಸುಮಾರು 125 ರೂ.ನಷ್ಟು ಹೊರೆ ಪ್ರತಿ ಲೀಟರ್‌ಗೆ ಬೀಳುತ್ತಿದೆ ಎಂದು ರಾಘವೇಂದ್ರ ಕೇಂದ್ರ ಸಚಿವರಿಗೆ ವಿವರಿಸಿದರು.
ಕರ್ನಾಟಕದ ಕರಾವಳಿಯಲ್ಲಿ ಒಟ್ಟು 8,030 ಪರವಾನಗಿ ಪಡೆದ ಸಾಂಪ್ರದಾಯಿಕ ಯಾಂತ್ರೀಕೃತ ಮೀನುಗಾರಿಕಾ ದೋಣಿಗಳಿದ್ದು, ಈ ವಲಯಕ್ಕೆ ವಾರ್ಷಿಕವಾಗಿ ಸುಮಾರು 24,090 ಕೆ.ಎಲ್. ಸೀಮೆಎಣ್ಣೆಯ ಅಗತ್ಯವಿದೆ. ಆದರೆ, ಪ್ರಸ್ತುತ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಮೂಲಕ ಕರ್ನಾಟಕಕ್ಕೆ ಪ್ರತಿ ತ್ರೈಮಾಸಿಕಕ್ಕೆ ಕೇವಲ 2,868 ಕೆ.ಎಲ್. ಸೀಮೆಎಣ್ಣೆ ಮಾತ್ರ ಹಂಚಿಕೆಯಾಗುತ್ತಿದ್ದು, ಇದರಲ್ಲಿ ಗೃಹಬಳಕೆಯ ಅಗತ್ಯವೂ ಸೇರಿದೆ. ಈ ಹಂಚಿಕೆಯಿಂದ ಮೀನುಗಾರಿಕಾ ಕ್ಷೇತ್ರದ ಅಗತ್ಯವನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಸಚಿವರಿಗೆ ಮಾಹಿತಿ ನೀಡಿದರು.
ಪ್ರತ್ಯೇಕ ಹಂಚಿಕೆಗೆ ಮನವಿ: ಈ ಹಿನ್ನೆಲೆಯಲ್ಲಿ, ಕರ್ನಾಟಕದ ಸಾಂಪ್ರದಾಯಿಕ ಯಾಂತ್ರೀಕೃತ ಮೀನುಗಾರಿಕಾ ದೋಣಿಗಳಿಗಾಗಿ 2026- 27ನೇ ಸಾಲಿನಲ್ಲಿ 24,090 ಕೆ.ಎಲ್. ಸಬ್ಸಿಡಿ ರಹಿತ ಸೀಮೆಎಣ್ಣೆಯನ್ನು ಪ್ರತ್ಯೇಕವಾಗಿ ಹಂಚಿಕೆ ಮಾಡುವಂತೆ ಸಂಸದರು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದರು. ರಾಜ್ಯದ ಮೀನುಗಾರಿಕಾ ಇಲಾಖೆಯೂ ಈ ಕುರಿತು ಕೇಂದ್ರ ಸರ್ಕಾರದ ಮುಂದೆ ಪ್ರತ್ಯೇಕ ಹಂಚಿಕೆಯ ಬೇಡಿಕೆಯನ್ನು ಸಲ್ಲಿಸಿರುವುದನ್ನು ಅವರು ಸಚಿವರ ಗಮನಕ್ಕೆ ತಂದರು. ಈ ಭೇಟಿ ಸಂದರ್ಭದಲ್ಲಿ ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು.
‘ಕರಾವಳಿಯ ಸಾಂಪ್ರದಾಯಿಕ ಮೀನುಗಾರರು ಶ್ರಮಜೀವಿಗಳಾಗಿದ್ದು, ತಮ್ಮ ಬದುಕನ್ನು ಸ್ವಾಭಿಮಾನ ಮತ್ತು ಸ್ವಾವಲಂಬನೆಯೊಂದಿಗೆ ಮುಂದು ವರಿಸಲು ಅಗತ್ಯವಾದ ನೆರವು ಮಾತ್ರ ಬಯಸುತ್ತಿದ್ದಾರೆ. ಕೇಂದ್ರ ಸರಕಾರ ದಿಂದ ಸೀಮೆಎಣ್ಣೆಯ ಪ್ರತ್ಯೇಕ ಹಂಚಿಕೆ ದೊರೆತರೆ ಸಾವಿರಾರು ಮೀನುಗಾರ ಕುಟುಂಬಗಳಿಗೆ ಹೆಚ್ಚಿನ ಅನುಕೂಲ ವಾಗಲಿದ್ದು, ಕರ್ನಾಟಕ ಕರಾವಳಿಯ ಸಾಂಪ್ರದಾಯಿಕ ಮೀನುಗಾರಿಕೆ ವಲಯಕ್ಕೆ ಅಗತ್ಯವಾದ ಬೆಂಬಲ ದೊರೆತಂತಾಗಲಿದೆ’ ಎಂದು ಬಿ.ವೈ.ರಾಘವೇಂದ್ರ ನುಡಿದರು.
ಮೀನುಗಾರರ ಹಿತದೃಷ್ಟಿಯಿಂದ ಮನವಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಸಚಿವರು ಸಕಾರಾ ತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಂಸದರ ಕಚೇರಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.






