ಅಲ್ತಾರು: ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಗೆ ಚಾಲನೆ

ಕೋಟ, ಆ.12: ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿಶ್ವ ಕುಂದಾಪುರ ಕನ್ನಡ ದಿನದಂತಹ ಕಾರ್ಯಕ್ರಮಗಳು ಅಗತ್ಯ. ಒಂದು ಕಾಲದಲ್ಲಿ ಸೀಮಿತ ಪ್ರದೇಶದಲ್ಲಿ ಮಾತ್ರ ಮಾತನಾಡುತ್ತಿದ್ದ ಕುಂದಾಪ್ರ ಕನ್ನಡ ಇಂದು ಹಬ್ಬದ ರೀತಿ ಕಾರ್ಯಕ್ರಮಗಳ ಮೂಲಕ ವಿಶ್ವದೆಲ್ಲೆಡೆ ಪಸರಿಸುತ್ತಿದೆ. ಭಾಷೆ ಮತ್ತು ಸಂಸ್ಕೃತಿ ಮತ್ತಷ್ಟು ವ್ಯಾಪಕವಾಗಿ ಹರಡಬೇಕಾದರೆ ಸಂಘ- ಸಂಸ್ಥೆಗಳು ಹೆಚ್ಚಿನ ಪ್ರಯತ್ನ ನಡೆಸಬೇಕು ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದ್ದಾರೆ.
ಜನಸೇವಾ ಟ್ರಸ್ಟ್ ಹಾಗೂ ಟೀಮ್ ಅಭಿಮತದ ಜಂಟಿ ಆಶ್ರಯದಲ್ಲಿ ಅಲ್ತಾರು ಪಡುಮನೆಯಲ್ಲಿ ಬುಧವಾರ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಗೆ ಅವರು ಚಾಲನೆ ನೀಡಿ ಮಾತನಾಡುತಿದ್ದರು.
ಪ್ರಾಂಶುಪಾಲ ಭಾಸ್ಕರ ಶೆಟ್ಟಿ ಮಾತನಾಡಿ, ನೆಲಮೂಲದ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಬೇಕು. ದೇಶಿ ಸಂಸ್ಕೃತಿಯನ್ನು ತಾಯಿಯನ್ನು ಪ್ರೀತಿಸುವಂತೆ ಪ್ರೀತಿಸಬೇಕು. ಜಾಗತೀಕರಣದ ಸಂದರ್ಭದಲ್ಲಿ ಸ್ಥಳೀಯ ಭಾಷೆ ಗಳು ಕಣ್ಮರೆಯಾಗುವುದನ್ನು ತಡೆಯುವುದು ಕಷ್ಟವಾದರೂ, ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ವರ್ಗಾ ಯಿಸುವುದು ಎಲ್ಲರ ಜವಾಬ್ದಾರಿ ಎಂದರು.
ಹಿರಿಯರಾದ ಶೇಡಿಕೊಡ್ಲು ವಿಠಲ ಶೆಟ್ಟಿ, ಅಲ್ತಾರು ಪಡುಮನೆಯ ಯಜಮಾನಿ ಶಕೀಲ ಹೆಗ್ಡೆ ಅಲ್ತಾರು, ಕುಂದಾಪುರ ಕನ್ನಡ ಸಾಹಿತ್ಯ ಸಂಶೋಧನಕಾರ ಮನು ಹಂದಾಡಿ ಕುಂದಾಪುರ ಕನ್ನಡದ ವಿಶೇಷತೆ ಕುರಿತು ಮಾತನಾಡಿದರು. ಉದ್ಯಮಿ ಅಶೋಕ್ ಪ್ರಭು ಸಾಹೇಬರಕಟ್ಟೆ, ಜನಸೇವಾ ಟ್ರಸ್ಟ್‌ನ ಉದಯ ಶೆಟ್ಟಿ ಪಡುಕೆರೆ, ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರದೀಪ್ ಬಲ್ಲಾಳ್, ನಿರ್ದೇಶಕ ಶರತ್ ಕುಮಾರ್ ಶೆಟ್ಟಿ, ಉದ್ಯಮಿ ಸಂದೀಪ್ ಶೆಟ್ಟಿ ಶಿರಿಯಾರ ಮೇಲ್ಮನೆ, ದಯಾನಂದ ಶೆಟ್ಟಿ ಹಾರಾಡಿ ಮೊದಲಾದವರು ಉಪಸ್ಥಿತರಿದ್ದರು.
ಜನಸೇವಾ ಟ್ರಸ್ಟ್‌ನ ವಸಂತ್ ಗಿಳಿಯಾರ್ ಸ್ವಾಗತಿಸಿದರು. ಪ್ರಣೂತ್ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.






