ಮಲ್ಪೆ ಕಡಲ ತೀರದಲ್ಲಿ ಕರ್ಕಿಡಕವಾವು ಬಲಿತರ್ಪಣ

ಉಡುಪಿ, ಆ.12: ಕೇರಳ ಸಮಾಜಮ್ ಉಡುಪಿ ವತಿಯಿಂದ ಉಡುಪಿ ಯಲ್ಲಿ ನೆಲೆಸಿರುವ ಕೇರಳ ಸಮಾಜ ಬಾಂಧವರಿಗಾಗಿ ಮಲ್ಪೆ ಕಡಲ ತೀರದಲ್ಲಿ ಬುಧವಾರ ಕರ್ಕಿಡಕವಾವು ಬಲಿತರ್ಪಣ ಕಾರ್ಯಕ್ರಮ ನಡೆಯಿತು.
ಮಲಯಾಳಂ ತಿಂಗಳಾದ ಕರ್ಕಿಡಕಂನ ಅಮಾವಾಸ್ಯೆಯ ದಿನವನ್ನು ಕರ್ಕಿಡಕವಾವು ಎಂದು ಆಚರಿಸಲಾಗುತ್ತದೆ. ಈ ದಿನ ಅಗಲಿದ ಪಿತೃಗಳಿಗೆ ಪಿಂಡ ಪ್ರದಾನ ಮಾಡುವ ಸಂಪ್ರದಾಯ ಕೇರಳದಲ್ಲಿ ರೂಢಿಯಲ್ಲಿದೆ. ಕೇರಳದ ವಿವಿಧೆಡೆ ಸಾವಿರಾರು ಮಂದಿ ಈ ದಿನದಂದು ಪಿತೃಗಳಿಗೆ ಬಲಿತರ್ಪಣ ನೆರವೇರಿಸುತ್ತಾರೆ.
ಉದ್ಯೋಗ, ಶಿಕ್ಷಣ ಸೇರಿದಂತೆ ವಿವಿಧ ಕಾರಣಗಳಿಂದ ಉಡುಪಿಯಲ್ಲಿ ನೆಲೆಸಿರುವ ಕೇರಳದವರಿಗೆ ಕೇರಳಕ್ಕೆ ತೆರಳಿ ಬಲಿತರ್ಪಣ ನೆರವೇರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೇರಳ ಸಮಾಜಮ್ ಕಳೆದ ಎರಡು ವರ್ಷಗಳಿಂದ ಮಲ್ಪೆ ಕಡಲ ತೀರದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
ಕೊಯಿಕೋಡ್‌ನಿಂದ ಆಗಮಿಸಿದ್ದ ಹಿರಿಯ ಪುರೋಹಿತ ಕುಮಾರ್ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಬಳಿಕ ಭಾಗವಹಿಸಿದ್ದವರು ಅಗಲಿದ ಕುಟುಂಬ ಸದಸ್ಯರಿಗೆ ಪಿಂಡ ಪ್ರದಾನ ನೆರವೇರಿಸಿದರು. ನಂತರ ಸಮುದ್ರ ಸ್ನಾನ ಮಾಡಿದರು.
ಈ ಸಂಧರ್ಭದಲ್ಲಿ ಕೇರಳ ಸಮಾಜಂ ಉಡುಪಿ ಅಧ್ಯಕ್ಷ ಅರುಣ್, ಕುಮಾರ್, ಕಾರ್ಯದರ್ಶಿ ಪ್ರಶಾಂತ್ ಕುಮಾರ್, ಕೋಶಾಧಿಕಾರಿ ರಮೇಶ್ ಈ.ಪಿ., ವಸಂತ್ ಕುಮಾರ್ ಪ್ರದೂಶ್ ಉಪಸ್ಥಿತರಿದ್ದರು.




