ರಂಗನಾಥನ್ ಗ್ರಂಥಾಲಯ ಜ್ಞಾನದ ಪಿತಾಮಹ: ಕಿಶೋರ್ ಕುಮಾರ್

ಉಡುಪಿ, ಆ.12: ನವಭಾರತದ ಗ್ರಂಥಾಲಯದ ಪರಿಕಲ್ಪನೆಗೆ ಹೊಸದಿಕ್ಕನ್ನು ಕಲ್ಪಿಸಿಕೊಟ್ಟ ಕೀರ್ತಿ ಡಾ.ಎಸ್.ಆರ್. ರಂಗನಾಥನ್ ಅವರಿಗೆ ಸಲ್ಲುತ್ತದೆ. ಅವರು ಮೂಲತ: ಗಣಿತಾಸ್ತ್ರದ ಪ್ರಾಧ್ಯಾಪಕರು. ಅವರ ಅದಮ್ಯವಾದ ಪುಸ್ತಕ ಪ್ರೀತಿ ಅವರನ್ನು ಗ್ರಂಥಾಲಯ ಜ್ಞಾನದ ಪಿತಾಮಹನನ್ನಾಗಿ ರೂಪಿಸಿದೆ ಎಂದು ಉಡುಪಿ ಎಂ.ಜಿ.ಎಂ. ಕಾಲೇಜಿನ ಗ್ರಂಥಪಾಲಕ ಕಿಶೋರ್ ಕುಮಾರ್ ಹೇಳಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಆ.12ರಂದು ಆಯೋಜಿಸ ಲಾದ ರಂಗನಾಥನ್ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಡಾ.ಎಸ್.ಆರ್.ರಂಗನಾಥನ್ ಅಂದು ರೂಪಿಸಿದ ವ್ಯವಸ್ಥೆಯಿಂದಾಗಿ ಶಾಲಾ ಕಾಲೇಜುಗಳಲ್ಲಿ, ಸಂಶೋಧನಾ ಕೇಂದ್ರಗಳಲ್ಲಿ ಗ್ರಂಥಾಲಯ ಆಧುನಿಕ ವ್ಯವಸ್ಥೆಯೊಂದಿಗೆ ಪರಿವರ್ತನೆಗೊಂಡಿದೆ. ಗ್ರಂಥಾಲಯದ ಪಂಚಸೂತ್ರಗಳು ಮತ್ತು ಕೊಲೊನ್ ವರ್ಗೀಕರಣ ಅವರ ಪ್ರಮುಖ ಕೊಡುಗೆಯಾಗಿದೆ. ಗ್ರಂಥಾಲಯದ ಬಗ್ಗೆ ಮಾಡಿದ ಸಾಧನೆ, ನೀಡಿದ ಕೊಡುಗೆ ಹಾಗೂ ಅವರ ಸೇವೆಗಾಗಿ ಅವರನ್ನು ಗ್ರಂಥಾಲಯದ ಪಿತಾಮಹ ಎಂದು ಕರೆಯುತ್ತಾರೆ. ಅವರ ಹುಟ್ಟುಹಬ್ಬವನ್ನು ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆ ಆಗಿ ಆಚರಿಸಲಾಗುತ್ತದೆ ಎಂದರು.
ಎಂ.ಜಿ.ಎಂ ಕಾಲೇಜಿನ ಗಾಂಧಿಯನ್ ಅಧ್ಯಯನ ಕೇಂದ್ರದ ನಿರ್ದೇಶಕ ವಿನೀತ್ ರಾವ್, ಆರ್.ಆರ್.ಸಿ ಸಹಸಂಶೋಧಕ ಡಾ.ಎಸ್.ಆರ್. ಅರುಣ್ ಕುಮಾರ್ ಉಪಸ್ಥಿತರಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು.






