ಕನ್ನಡ ಕೀಲಿಮಣೆ ವಿನ್ಯಾಸಕಾರ ಪ್ರೊ.ಕೆ.ಪಿ.ರಾವ್, ಡಾ.ಯು.ಪಿ. ಉಪಾಧ್ಯಾಯ ದಂಪತಿ ಪ್ರಶಸ್ತಿಗೆ ಆಯ್ಕೆ

ಪ್ರೊ.ಕೆ.ಪಿ.ರಾವ್
ಉಡುಪಿ, ಆ.13: ಕಂಪ್ಯೂಟರ್ನಲ್ಲಿ ಕನ್ನಡ ಕೀಲಿಮಣೆ ವಿನ್ಯಾಸಕಾರ ಪ್ರೊ.ಕೆ.ಪಿ.ರಾವ್ ಅವರು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ನೀಡಲಾಗುವ ಡಾ.ಯು.ಪಿ ಉಪಾಧ್ಯಾಯ ಮತ್ತು ಡಾ.ಸುಶೀಲಾ ಪಿ. ಉಪಾಧ್ಯಾಯ ಸಂಶೋಧನಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ತುಳು ನಿಘಂಟು ರಚನೆ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿರುವ ಬಹುಭಾಷಾ ವಿದ್ವಾಂಸರೂ ಆಗಿದ್ದ ಡಾ.ಯು.ಪಿ ಉಪಾಧ್ಯಾಯ ಮತ್ತು ಡಾ.ಸುಶೀಲಾ ಪಿ.ಉಪಾಧ್ಯಾಯರ ನೆನಪಿನ ಈ ಪ್ರಶಸ್ತಿ ಹತ್ತು ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನೊಳ ಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ಸೆಪ್ಟಂಬರ್ ತಿಂಗಳಲ್ಲಿ ನಡೆಯಲಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರೊ.ಕೆ.ಪಿ.ರಾವ್ ಎಂದೇ ಪ್ರಸಿದ್ಧರಾದ ಕಿನ್ನಿಕಂಬಳ ಪದ್ಮನಾಭ ರಾವ್ ಅವರು 1940ರ ಫೆಬ್ರವರಿ 29ರಂದು ಮಂಗಳೂರು ಸಮೀಪದ ಕಿನ್ನಿಕಂಬಳ ದಲ್ಲಿ ಜನಿಸಿದ್ದು, 1959ರಲ್ಲಿ ಸೈಂಟ್ ಅಲೋಶಿಯಸ್ ಕಾಲೇಜಿನಿಂದ ಬಿಎಸ್ಸಿ ಪದವಿ ಪಡೆದಿದ್ದರು. ಬಳಿಕ ಮುಂಬಯಿಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್ನ ಆಣುಶಕ್ತಿ ವಿಭಾಗದಲ್ಲಿ ಸಂಶೋಧಕರಾಗಿ ವೃತ್ತಿಜೀವನ ಆರಂಬಿಸಿ, 1970ರ ದಶಕದಲ್ಲಿ ಟಾಟಾ ಪ್ರೆಸ್ಗೆ ಸೇರ್ಪಡೆ ಯಾದ ನಂತರ ಅಕ್ಷರ, ಮುದ್ರಣ ಮತ್ತು ಭಾಷಾತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದರು.
ಬಳಿಕಮಾನೋಟೈಪ್ ಸಂಸ್ಥೆಯ ನಿರ್ದೇಶಕರಾಗಿ, ಕ್ವಾರ್ಕ್ ಎಕ್ಸ್ಪ್ರೆಸ್ ಮತ್ತು ಅಡೋಬ್ ಸಿಸ್ಟಮ್ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳ ಸಲಹೆಗಾರರಾಗಿ ಹಾಗೂ ಮಣಿಪಾಲ ಸಮೂಹದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕ ರಾಗಿ ಸೇವೆ ಸಲ್ಲಿಸಿದರು.
ಭಾರತೀಯ ಭಾಷೆಗಳ ಗಣಕೀಕರಣದಲ್ಲಿ ಕೆ.ಪಿ. ರಾವ್ ಅವರದ್ದು ಅತ್ಯಂತ ದೊಡ್ಡ ಕೊಡುಗೆ. ಉಚ್ಚಾರಣಾತ್ಮಕ ತರ್ಕವನ್ನು ಆಧರಿಸಿ ಕೀಲಿಮಣೆ ವಿನ್ಯಾಸ ರೂಪಿಸುವ ಮೂಲಕ ಕನ್ನಡ ಸೇರಿದಂತೆ ಭಾರತೀಯ ಭಾಷೆಗಳನ್ನು ಕಂಪ್ಯೂಟರ್ನಲ್ಲಿ ಸುಲಭವಾಗಿ ಬಳಸಲು ಸಹಕಾರಿಯಾದರು. ಕನ್ನಡ ಕೀಲಿಮಣೆ ವಿನ್ಯಾಸವನ್ನು ಅಭಿವೃದ್ಧಿಪಡಿಸಿ, ’ಸೇಡಿಯಾಪು’ ಕನ್ನಡ ಪದ ಸಂಸ್ಕಾರಕ ತಂತ್ರಾಂಶವನ್ನು ರಚಿಸಿ ಮುಕ್ತ ಬಳಕೆಗೆ ನೀಡಿದರು. ಲೇಖಕ- ಸಾಹಿತಿಯಾಗಿ ಅವರ ಪ್ರಮುಖ ಕಾದಂಬರಿ‘ವರ್ಣಕ’.
ಪ್ರೊ.ಕೆ.ಪಿ. ರಾವ್ ಅವರ ಕನ್ನಡ ಕೀಲಿಮಣೆ ವಿನ್ಯಾಸಕ್ಕೆ ಕರ್ನಾಟಕ ಸರ್ಕಾರದ ಅಧಿಕೃತ ಕೀಲಿಮಣೆ ವಿನ್ಯಾಸವೆಂಬ ಮಾನ್ಯತೆ ದೊರೆತಿದೆ. ತುಳು ಅಕಾಡೆಮಿ ಸೇರಿದಂತೆ ಹಲವು ಸಂಸ್ಥೆಗಳು ಅವರನ್ನು ಗೌರವಿಸಿದ್ದು, 2009ರ ಆಳ್ವಾಸ್ ನುಡಿಸಿರಿ ಸನ್ಮಾನ, 2013ರಲ್ಲಿ ಹಂಪಿ ಕನ್ನಡ ವಿವಿಯ ‘ನಾಡೋಜ’ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ 2021ರ ಡಾ. ಶಿವರಾಮ ಕಾರಂತ ಬಾಲವನ ಪ್ರಶಸ್ತಿ ಸೇರಿದಂತೆ ಹಲವು ಪ್ರತ್ಠಿತ ಗೌರವಗಳು ಅವರಿಗೆ ಸಂದಿವೆ.
ಕೆ.ಪಿ.ರಾವ್ ಅವರ ಜೀವನ ಮತ್ತು ಸಾಧನೆಗಳ ಕುರಿತು ‘ಕಂಪ್ಯೂಟರ್, ಕನ್ನಡ, ಕೆ. ಪಿ. ರಾವ್’ (2013), ‘ಭಾರತೀಯ ಭಾಷಾ ಗಣಕ ಪಿತಾಮಹ ನಾಡೋಜ ಕೆ. ಪಿ. ರಾವ್’ (2020)’ ಮತ್ತು ‘ನಾಡೋಜ ಕೆ.ಪಿ. ರಾಯರ ನಾಡಿ, ನಡೆ, ನುಡಿ’ (2020) ಸೇರಿದಂತೆ ಹಲವು ಕೃತಿಗಳು ಪ್ರಕಟವಾಗಿವೆ.






