ಉಡುಪಿ: ಬೇಡಿಕೆ ಈಡೇರಿಕೆಗೆ ಪಿಂಚಣಿದಾರರ ಧರಣಿ, ಪ್ರತಿಭಟನೆ

ಉಡುಪಿ, ಆ.13: ಭವಿಷ್ಯನಿಧಿ ಪಿಂಚಣಿದಾರರಿಗೆ ಪಿಂಚಣಿಯನ್ನು ಕನಿಷ್ಠ 9,000ರೂ.ಗೆ ಹೆಚ್ಚಿಸಬೇಕು. ಕಾಲಕಾಲಕ್ಕೆ ಹೆಚ್ಚಳವಾಗುವ ತುಟ್ಟಿಭಟ್ಯೆಯನ್ನು ಹೆಚ್ಚಿಸಬೇಕು ಎಂಬ ಬೇಡಿಕೆಯೂ ಸೇರಿದಂತೆ ಉಡುಪಿ ಜಿಲ್ಲೆಯ ಪಿಂಚಣಿದಾ ರರು ತಮ್ಮ ಹಲವು ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಭವಿಷ್ಯ ನಿಧಿ ಪಿಂಚಣಿದಾರರ ಉಡುಪಿ ವಲಯ ಸಮಿತಿ (ಸಿಐಟಿಯು) ನೇತೃತ್ವದಲ್ಲಿ ಇಂದು ಉಡುಪಿಯ ಭವಿಷ್ಯ ನಿಧಿ ಕಛೇರಿ ಮುಂದೆ ಧರಣಿ ಪ್ರತಿಭಟನೆ ನಡೆಸಿದರು.
ಪಿಂಚಣಿದಾರರು ಹಲವು ಜ್ವಲಂತ ಸಮಸ್ಯೆಗಳನ್ನು ಎದುರಿಸುತಿದ್ದು, ಕೆಲವು ಪಿಂಚಣಿದಾರರಿಗೆ ಕೇವಲ 600, 700ರೂ. ಪಿಂಚಣಿ ಬರುತ್ತಿದೆ. ಇಷ್ಟು ಕಡಿಮೆ ಪಿಂಚಣಿಯಲ್ಲಿ ಜೀವನದ ಸಂಧ್ಯಾಕಾಲದಲ್ಲಿ ಜೀವನ ನಿರ್ವಹಣೆ ಹೇಗೆ ಸಾಧ್ಯ ಎಂದವರು ಪ್ರಶ್ನಿಸಿದರು. ಈ ಕುರಿತು ಭವಿಷ್ಯನಿಧಿ ಆಯುಕ್ತರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪರಿಹಾರ ಈವರೆಗೆ ಸಿಕ್ಕಿಲ್ಲ ಎಂದು ದೂರಿದರು.
ವಯೋವೃದ್ಧರಾದ ಕಾರ್ಮಿಕರನ್ನು ಪಿಂಚಣಿ ಅರ್ಜಿ ಸಲ್ಲಿಸಲು ಬಂದರೆ ವಿವಿಧ ನೆಪಹೇಳಿ ಅಲೆದಾಡಿಸಲಾಗುತ್ತದೆ. ಸಿಬ್ಬಂದಿಗಳಿಗೆ ಹಿರಿಯ ನಾಗರಿಕ ರೊಂದಿಗೆ ವ್ಯವಹಿಸುವ ಕುರಿತು ಸೂಕ್ತ ತರಬೇತಿ ನೀಡಬೇಕು ಎಂದು ಪ್ರತಿಭಟನಕಾರರು ನುಡಿದರು.
ಪ್ರತಿಭಟನೆ ಸಭೆಯನ್ನು ಉದ್ದೇಶಿಸಿ ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ ಜಿಲ್ಲಾ ಅಧ್ಯಕ್ಷ ಸುಕುಮಾರ್ ತೊಕ್ಕೊಟ್ಟು ಮತ್ತು ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಎಚ್.ನರಸಿಂಹ ಮಾತನಾಡಿ ದರು. ಪ್ರತಿಭಟನೆಯ ಕೊನೆಯಲ್ಲಿ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿ ಕೆಲವು ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಅವರೊಂದಿಗೆ ಚರ್ಚಿಸಲಾಯಿತು.
ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ಕಾರ್ಯದರ್ಶಿ ಕವಿರಾಜ್ ಎಸ್.ಕಾಂಚನ್, ಕೋಶಾಧಿಕಾರಿ ಬಲ್ಕೀಸ್, ಕಾರ್ಕಳ ತಾಲೂಕು ಬೀಡಿ ಕಾರ್ಮಿಕ ಸಂಘದ ಅಧ್ಯಕ್ಷೆ ಸುನೀತ ಶೆಟ್ಟಿ, ಬೀಡಿ ಎಂಡ್ ಟೊಬ್ಯಾಕೋ ಲೇಬರ್ ಯೂನಿಯನ್ ಉಡುಪಿ ಅಧ್ಯಕ್ಷ ರಾದ ನಳಿನಿ.ಎಸ್, ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ, ಸಿಐಟಿಯು ಉಡುಪಿ ಜಿಲ್ಲಾ ಅಧ್ಯಕ್ಷ ಶಶಿಧರ ಗೊಲ್ಲ, ಸಿಐಟಿಯು ಮುಖಂಡರಾದ ನಾಗೇಶ್ ಬೆಳ್ಮಣ್, ಉಡುಪಿ ಕಟ್ಟಡ ಸಂಘದ ಮುಖಂಡರಾದ ದಯಾನಂದ ಕೋಟ್ಯಾನ್, ಭವಿಷ್ಯ ನಿಧಿ ಪಿಂಚಣಿದಾರರ ಸಂಘದ ಅಧ್ಯಕ್ಷ ಲಲಿತ ಸುವರ್ಣ, ಕೋಶಾಧಿಕಾರಿ ಸರೋಜ ಎಸ್, ಮುಖಂಡರಾದ ಗಿರಿಜಾ, ವಸಂತಿ, ವಾರಿಜ, ಇಂದಿರಾ, ಸುಂದರಿ, ರಮೇಶ್ ಜತ್ತನ್ನ, ಸುಮತಿ ಕಾರ್ಕಳ, ವಿಶಾಲ, ಲಕ್ಷೀ ಕಾರ್ಕಳ ಉಪಸ್ಥಿತರಿದ್ದರು.






