‘ಗುಣಮಟ್ಟದ ಮಸಾಲೆ ಪುಡಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುʼ

ಉಡುಪಿ, ಆ.15: ರಾಜ್ಯ ಆಹಾರ, ನಾಗರೀಕ ಸರಬರಾಜು ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಿಝ್ವಾನ್ ಅರ್ಷದ್ ಇಂದು ದೊಡ್ಡಣಗುಡ್ಡೆ ಶಿವಳ್ಳಿ ತೋಟಗಾರಿಕಾ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಉಡುಪಿ ಸಂಜೀವಿನಿ ಮಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿಯ ‘ಇಲ್ಲು ಫುಡ್ಸ್ ಮಸಾಲಾ ಪುಡಿ’ ತಯಾರಿಕಾ ಘಟಕವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಹಾರ ಪದಾರ್ಥಗಳು ಗುಣಮಟ್ಟದಲ್ಲಿ ಚೆನ್ನಾಗಿದ್ದಾಗ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿರುವುದು ಸಾಮಾನ್ಯ. ಸಂಜೀವಿನಿ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿಯು ಇಲ್ಲು ಫುಡ್ಸ್ ಮಸಾಲಾ ಪುಡಿ ತಯಾರಿಕಾ ಘಟಕವನ್ನು ಪ್ರಾರಂಭಿಸಿರುವುದು ಒಂದು ಒಳ್ಳೆಯ ಬೆಳವಣಿಗೆ. ಮಸಾಲೆ ಪುಡಿ ಉತ್ತಮ ಗುಣಮಟ್ಟವನ್ನುಕಾಯ್ದುಕೊಂಡು ಮಾರುಕಟ್ಟೆಯ ವಿಸ್ತರಣೆಗೆ ಒತ್ತು ನೀಡುವುದರ ಜೊತೆಗೆ ಯಶಸ್ವಿಗೊಳಿಸ ಬೇಕೆಂದು ಕಿವಿಮಾತು ಹೇಳಿದರು.
ಕಂಪೆನಿಗಳ ಕಾಯ್ದೆಯಡಿ ಅಧಿಕೃತವಾಗಿ ನೋಂದಾಯಿಸಲ್ಪಟ್ಟಿರುವ ಈ ಕಂಪೆನಿಯು ಮಹಿಳಾ ನೇತೃತ್ವದ ಕೃಷಿ ಮತ್ತು ಗ್ರಾಮೀಣ ಉದ್ಯಮಗಳನ್ನು ಬಲಪಡಿಸುವ ಉದ್ದೇಶ ಹೊಂದಿದೆ. ಉಡುಪಿ ತಾಲೂಕಿನ 16 ಗ್ರಾಮ ಪಂಚಾ ಯತ್‌ಗಳ 1000 ಮಹಿಳಾ ರೈತರು ಷೇರು ಬಂಡವಾಳ ಹೂಡಿಕೆ ಮಾಡಿದ್ದಾರೆ. ಕೃಷಿ, ಪಶುಸಂಗೋಪನೆ ಮತ್ತು ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸಣ್ಣ ಮತ್ತು ಅತಿ ಸಣ್ಣ ಮಹಿಳಾ ಉತ್ಪಾದಕರು ಈ ಕಂಪನಿಯ ಸಾಮೂಹಿಕ ಒಡೆತನ ಹೊಂದಿದ್ದಾರೆ.
ರೈತ ಮಹಿಳೆಯರಿಗೆ ಸ್ವ-ಉದ್ಯೋಗ ಚಟುವಟಿಕೆಗೆ ಅವಕಾಶ ಕಲ್ಪಿಸುವು ದರೊಂದಿಗೆ ಸ್ಥಳೀಯ ಕೃಷಿ ಉತ್ಪನ್ನಗಳಿಗೆ ಸೂಕ್ತ ಮೌಲ್ಯವರ್ಧನೆ ಒದಗಿಸಲಿದ್ದು, ಮಹಿಳೆಯರ ಜೀವನೋಪಾಯ ವೃದ್ಧಿಗೆ ಈ ಕಂಪನಿಯು ನೆರವಾಗಲಿದೆ.
ಈ ಸಂದರ್ಭದಲ್ಲಿ ಮಂಗಳೂರು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.






