ಸಮುದ್ರ ಮಧ್ಯೆ ಮುಳುಗಿದ ಬೋಟು: ಆರು ಮೀನುಗಾರರ ರಕ್ಷಣೆ

ಕುಂದಾಪುರ, ಆ.16: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೊರಟ ಬೋಟೊಂದು ಸಮುದ್ರ ಮಧ್ಯೆ ಮುಳುಗಿದ ಘಟನೆ ಶುಕ್ರವಾರ ತಡರಾತ್ರಿ ಮರವಂತೆ ಸಮೀಪದ ನಡೆದಿದೆ. ಬೋಟಿನಲ್ಲಿದ್ದ 6 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.
ಕೋಟ ಕದ್ರಿಕಟ್ಟು ನಿವಾಸಿ ಕೃಷ್ಣ ಪುತ್ರನ್ ಎಂಬವರ ಸಿಂಚನಾ ಎಂಬ ಬೋಟು ಆ.12ರಂದು ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿತ್ತು. ಆ.14ರಂದು ರಾತ್ರಿ ಬೋಟಿನ ತಳಭಾಗಕ್ಕೆ ವಸ್ತುವೊಂದು ತಗುಲಿ ಒಳಗೆ ನೀರು ಬರಲಾರಂಭಿಸಿತು. ಬೋಟು ಮುಳುಗುತ್ತಿದ್ದನ್ನು ಕಂಡು ಕೂಡಲೇ ಅಲ್ಲಿಯೇ ಮೀನುಗಾರಿಕೆ ನಡೆಸುತ್ತಿದ್ದ ಬೃಂದಾ ವನ ಹಾಗೂ ಗುರು ದರ್ಶನ್ ಬೋಟಿನವರು ಹತ್ತಿರ ಬಂದು, ಬೋಟಿನಲ್ಲಿದ್ದ ಮೀನುಗಾರರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.
ಆ ಎರಡು ಬೋಟಿನವರ ಸಹಕಾರದಿಂದ ಮುಳುಗುತ್ತಿದ್ದ ಬೋಟನ್ನು ಹಗ್ಗ ಕಟ್ಟಿ, ಎಳೆದುಕೊಂಡು ದಡದತ್ತ ತರಲು ಪ್ರಯತ್ನಿಸಿದರೂ, ಗಂಗೊಳ್ಳಿ ಲೈಟ್ ಹೌಸ್ ಸಮೀಪ ಸುಮಾರು 12 ಮೈಲು ದೂರದಲ್ಲಿ ಅಲೆಗಳ ಅಬ್ಬರಕ್ಕೆ ರೋಪ್ ತುಂಡಾಗಿ, ಬೋಟ್ ಸಂಪೂರ್ಣ ಮುಳುಗಡೆಗೊಂಡಿತು.
ಇದರಿಂದ ಬೋಟಿನಲ್ಲಿದ್ದ 2,500 ಲೀ. ಡೀಸೆಲ್, ಜಿಪಿಎಸ್ ಫೈರ್ ಫೈಬರ್ ವಯರ್ ಲೆಸ್ ಪರಿಕರ, ಸುಮಾರು 2.50 ಲಕ್ಷ ರೂ. ಮೌಲ್ಯದ ಮೀನು, ಬಲೆ, ಬೋಟು, ಇನ್ನಿತರ ಸೊತ್ತುಗಳೆಲ್ಲ ಸೇರಿದಂತೆ ಬೋಟು ಸಂಪೂರ್ಣ ಮುಳುಗಡೆಯಾಗಿದ್ದು, ಇದರಿಂದ 45 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಈ ಬಗ್ಗೆ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






