ಬಹುತ್ವವೇ ಭಾರತ ದೇಶದ ಶಕ್ತಿ: ಡಾ.ವಾಸುದೇವ ಬೆಳ್ಳೆ

ಉಡುಪಿ, ಆ.16: ಇಂಡಿಯಾ ಎಂದರೆ ಒಂದು ಬಹುತ್ವದ ದೇಶ. ವಿವಿಧ ಧರ್ಮ, ವಿವಿಧ ಭಾಷೆ, ವಿವಿಧ ಸಂಸ್ಕೃತಿ ,ವಿವಿಧ ಆಚರಣೆಗಳ ಒಟ್ಟು ಮೊತ್ತವೇ ಭಾರತ. ಕುವೆಂಪು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟ. ಇದೇ ಭಾರತದ ಸೌಂದರ್ಯ. ಬಹುತ್ವ ಎಂಬುದು ಒಂದು ದೇಶದ ಶಕ್ತಿಯೇ ವಿನಹ ನಿಶಕ್ತಿ ಅಲ್ಲ ಎಂದು ಚಿಂತಕ, ಮುಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ ಹೇಳಿದ್ದಾರೆ.
ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ 80ನೇ ಸ್ವಾತಂತ್ರೋತ್ಸವದ ಅಂಗವಾಗಿ ಉದ್ಯಾವರ ಹಫ್ಸಾ ಅಡಿಟೋರಿಯಂನಲ್ಲಿ ಶನಿವಾರ ಆಯೋಜಿಸಲಾದ ಯು.ಪದ್ಮನಾಭ ಶೆಟ್ಟಿಗಾರ್, ಸದಾನಂದ ಕಾಂಚನ್, ಟಿ. ವೈ.ಶಾಬುದ್ಧೀನ್, ಐರಿನ್ ಮಿನೇಜಸ್ ಜಾರ್ಜ್ ಮಿನೇಜಸ್, ಮನೋಹರ್ ಕೋಟ್ಯಾನ್ ಸ್ಮಾರಕ ವಿದ್ಯಾರ್ಥಿವೇತನ ಮತ್ತು ಅಬ್ದುಲ್ ಜಲೀಲ್ ಸಾಹೇಬರ ಪ್ರಾಯೋಜಕತ್ವದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ಸ್ವತಂತ್ರ ಭಾರತ ನಮಗೆ ಸಂವಿಧಾನವನ್ನು ಕೊಟ್ಟಿದೆ ಅದರಲ್ಲಿ ಕಟ್ಟ ಕಡೆಯ ವ್ಯಕ್ತಿಗೂ ಈ ದೇಶದಲ್ಲಿ ಬದುಕುವ ಹಕ್ಕು, ಗೌರವವನ್ನು ಕೊಟ್ಟಿದೆ. ಸಂವಿಧಾನದ ಬೇರೆ ಬೇರೆ ಪರಿಚ್ಛೇದಗಳಲ್ಲಿ ನಮಗೆ ಪ್ರಶ್ನಿಸುವ, ಬದುಕುವ ಹಕ್ಕನ್ನು ಕೊಟ್ಟಿದೆ. ಆದರೆ ಇಂದು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತಮಗಾದ ಅನ್ಯಾಯವನ್ನು ಪ್ರಶ್ನಿಸಿದರೆ ಅವರು ದೇಶ ದ್ರೋಹಿಗಳಾಗಿ ಬಿಂಬಿತ ರಾಗುತ್ತಾರೆ. ಈ ಬಗ್ಗೆ ನಾವು ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಯೋಚಿಸ ಬೇಕಾಗಿದೆ. ಇಂತಹ ವಿದ್ಯಾಮಾನಗಳು ನಿಂತರೆ ಮುಂದಿನ ದಿನಗಳಲ್ಲಿ ಭವ್ಯ ಭಾರತದ ನಿರ್ಮಾಣವಾದೀತು ಎಂದರು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಜನಸಂಖ್ಯೆಯಲ್ಲಿ ದೊಡ್ಡದಾದ ನಮ್ಮ ದೇಶ ಪ್ರಜಾ ಪ್ರಭುತ್ವ ನೆಲೆಯಲ್ಲಿ ಇಂದು ಚಲಿಸುತ್ತಿರುವುದಕ್ಕೆ ಮುಖ್ಯ ಕಾರಣ ಈ ದೇಶದ ಸಂವಿಧಾನ. ಇವತ್ತು ಸಂವಿಧಾನವನ್ನು ಬದಲಾಯಿಸುವ ಮಾತುಗಳು ಕೇಳಿ ಬರುತ್ತಿವೆ. ಇದು ಅತ್ಯಂತ ಅಪಾಯಕಾರಿ. ಸಂವಿಧಾನದ ಬದಲಾದರೆ ಈ ದೇಶದ ಅಭಿವೃದ್ಧಿಗೆ ಮಾರಕಾಗಬಹುದು. ದೇಶದ ಸಮಗ್ರತೆಗೆ ಅಪಾಯ ಬರಬಹುದು ಎಂದರು.
ವಿಧಾನ ಪರಿಷತ್ ಸದಸ್ಯ ಪಿ.ವಿ.ಮೋಹನ್ ಮಾತನಾಡಿ, ಇಂದಿನ ಮಕ್ಕಳು ನಮಗಿಂತ ಎಷ್ಟೋ ಪಟ್ಟು ಮಾನಸಿಕ ವಾಗಿ ಮುಂದುವರಿದಿದ್ದಾರೆ. ಕೃತಕ ಬುದ್ಧಿಮತ್ತೆಯ ಈ ಕಾಲದಲ್ಲಿದ್ದಾರೆ. ಆದ್ದರಿಂದ ಸ್ವಾತಂತ್ರ್ಯ ಎಂದರೇನು ಎಂದು ಅವರಿಗೆ ಕಲಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇತ್ತೀಚೆಗೆ ತಮ್ಮ ಮೇಲಾದ ಅನ್ಯಾಯದ ವಿರುದ್ಧ ದೆಹಲಿಯಲ್ಲಿ ಜರಗಿದ ವಿದ್ಯಾರ್ಥಿಗಳ ಚಳವಳಿಯನ್ನು ಗಮನಿಸಿದಾಗ ಇಂದಿನ ವಿದ್ಯಾರ್ಥಿಗಳ ಆತ್ಮಸ್ಥೈರ್ಯವನ್ನು ಮೆಚ್ಚಬೇಕಾಗು ತ್ತದೆ. ಈ ಧೈರ್ಯವೇ ಮುಂದೆ ದೇಶ ಕಟ್ಟಲು ಪೂರಕ ವಾಗುತ್ತದೆ ಎಂದರು.
ಯುವ ಲೇಖಕಿ ಫಾತಿಮಾ ರಲಿಯಾ ಮಾತನಾಡಿದರು. ಈ ಸಂದರ್ಭ ದಲ್ಲಿ ಸಾಧಕರಾದ ಡಾ.ಪವಿತ್ರ ಕಾಮತ್, ಹಂಸಿಕಾ ಆರ್.ಪೂಜಾರಿ ಮತ್ತು ಅನ್ಮೋಲ್ ಬೆನೆಡಿಕ್ಟ್ ಕರ್ಕಡ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ನಿರ್ದೇಶಕರಾದ ಯು.ಪದ್ಮನಾಭ ಕಾಮತ್, ಚಂದ್ರಾವತಿ ಎಸ್.ಭಂಡಾರಿ, ಕೋಶಾಧಿಕಾರಿ ಸತೀಶ್ ಡಿ.ಸಾಲಿಯಾನ್ ಉಪಸ್ಥಿತರಿದ್ದರು,
ಸಂಸ್ಥೆಯ ಅಧ್ಯಕ್ಷ ಗಿರೀಶ್ ಗುಡ್ಡೆಯಂಗಡಿ ಸ್ವಾಗತಿಸಿದರು. ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಆಶಾವಾಸು ಸಮವಸ್ತ್ರದ ಫಲಾನುಭವಿಗಳ ಹೆಸರು ವಾಚಿಸಿ ದರು. ಲೆಕ್ಕಪರಿಶೋಧಕ ತಿಲಕ್ ರಾಜ್ ಸಾಲ್ಯಾನ್ ವಿದ್ಯಾರ್ಥಿವೇತನ ವಿಜೇತರ ಹೆಸರು ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಸುಹೇಲ್ ರಹಮತ್ತುಲ ವಂದಿಸಿದರು. ಮಾಜಿ ಅಧ್ಯಕ್ಷ ಅನುಪ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.






