ಗ್ರಾಮೀಣ ಕ್ರೀಡೆಗಳ ಆಟೋಟ ಸ್ಪರ್ಧೆ ‘ಲಗೋರಿ’ ಉದ್ಘಾಟನೆ

ಕುಂದಾಪುರ, ಆ.16: ಗ್ರಾಮೀಣ ಆಟಗಳು, ಕ್ರೀಡೆಗಳಿಂದ ಜನರನ್ನು ಪ್ರೀತಿಯಲ್ಲಿ ಒಗ್ಗೂಡಿಸುವಂತಹ ಕೆಲಸ ಆಗುತ್ತಿತ್ತು. ಕುಂದಾಪ್ರ ಕನ್ನಡ ಭಾಷಿಕ ಪ್ರದೇಶಗಳಲ್ಲಿ ರೂಢಿಯಲ್ಲಿದ್ದ ವಿಶಿಷ್ಟವಾದ ಪಾರಂಪರಿಕ ಆಟಗಳು, ಕ್ರೀಡೆಗಳು ಕಣ್ಮರೆಯಾಗಬಾರದು. ಗ್ರಾಮೀಣ ಕ್ರೀಡೆಗಳನ್ನು ಮುಂದಿನ ತಲೆಮಾರಿಗೆ ಕೊಂಡಿಯ್ಯುವ ಹಾಗೂ ಕುಂದಾಪ್ರ ಭಾಷೆ ಮತ್ತು ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಲಗೋರಿ’ ಕಾರ್ಯಕ್ರಮ ಸ್ತುತ್ಯಾರ್ಹವಾದುದು ಎಂದು ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಹೇಳಿದ್ದಾರೆ.
ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ವತಿಯಿಂದ ಕುಂದಾಪುರದ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ರವಿವಾರ ಆಯೋಜಿಸಲಾಗಿದ್ದ ಗ್ರಾಮೀಣ ಕ್ರೀಡೆಗಳ ಆಟೋಟ ಸ್ಪರ್ಧೆ ಲಗೋರಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ತಾಲೂಕು ಯುವಜನ ಮತ್ತು ಸೇವಾ ಕ್ರೀಡಾಧಿಕಾರಿ ಸತ್ಯನಾರಾಯಣ ಬಾಡ ಅವರು ಲಗೋರಿ ಆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಿವೃತ್ತ ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ, ಜಿಲ್ಲಾ ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕುಸುಮಾಕರ ಶೆಟ್ಟಿ, ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷ ಸತೀಶ ಹೆಗ್ಡೆ, ಪ್ರಶಾಂತ ತೋಳಾರ್, ಆಶಾ ತೋಳಾರ್, ವಿದ್ಯುತ್ ಗುತ್ತಿಗೆದಾರ ಕೆ.ಆರ್.ನಾಯ್ಕ್, ಭಾಸ್ಕರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಅಧ್ಯಕ್ಷ ಕಿಶೋರ್ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದೈ.ಶಿ.ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು. ರಾಜೇಶ ಕಾವೇರಿ ವಂದಿಸಿದರು.
ನಿಮ್ಮ ಕಾಲ್ಗುಣ, ಗೋಣಿಚೀಲ ಓಟ, ಮಾನವ ಕಂಬಳ, ಗೂಟ ಸುತ್ತಿ ಓಟ, ಚಕ್ರವ್ಯೆಹ, ಮಡಿಕೆ ಒಡೆಯುವುದು ಡೊಂಕಾಲು, ಸೈಕಲ್ ಟೈರ ಓಡಿಸುವುದು, ಪ್ರೋಬಾಲ್ ಹಗ್ಗ ಜಗ್ಗಾಟ ಸೇರಿದಂತೆ ಅನೇಕ ಕ್ರೀಡೆಗಳು ಲಗೋರಿಯ ಪ್ರಮುಖ ಆಕರ್ಷಣೆಯಾಗಿತ್ತು.






