ಮಾನಸಿಕ ಖಿನ್ನತೆಗೆ ಒಳಗಾಗಿ ಸಮುದ್ರ ಮಧ್ಯೆ ಈಜುತ್ತಿದ್ದ ವ್ಯಕ್ತಿಯ ರಕ್ಷಣೆ

ಪಡುಬಿದ್ರಿ, ಆ.16: ಸಮುದ್ರಕ್ಕಿಳಿದು ಸುಮಾರು ಮೂರು ಗಂಟೆಗಳ ಕಾಲ ಈಜುತ್ತಿದ್ದ ಮಾನಸಿಕ ಖಿನ್ನತೆಗೆ ಒಳಗಾದ ವ್ಯಕ್ತಿಯೊಬ್ಬರನ್ನು ರಕ್ಷಿಸಿದ ಘಟನೆ ಇಂದು ಮಧ್ಯಾಹ್ನ ವೇಳೆ ಪಡುಬಿದ್ರೆ ಬ್ಲೂಫ್ಲ್ಯಾಗ್ ಬೀಚ್‌ನಲ್ಲಿ ನಡೆದಿದೆ.
ಕಾಡಿಪಟ್ಣ ನಿವಾಸಿ ಯತೀಶ್(38) ಎಂಬವರು ಸಮುದ್ರಕ್ಕಿಳಿದು ಮೂರು ಗಂಟೆಗಳ ಕಾಲ ಈಜಾಡುತ್ತಿದ್ದರು. ಈ ಬಗ್ಗೆ ಗಮನಿಸಿದ ಸ್ಥಳೀಯರು ದೊಣಿ ಮೂಲಕ ತೆರಳಿ ಅವರನ್ನು ರಕ್ಷಿಸಲು ಯತ್ನಿಸಿದರು. ಆದರೆ ಅವರು ಬರಲು ಒಪ್ಪದೆ ಸಮುದ್ರದಲ್ಲಿಯೇ ಉಳಿದುಕೊಂಡರು.
ಈ ಬಗ್ಗೆ ಮಾಹಿತಿ ತಿಳಿದು ಮಧ್ಯಾಹ್ನ 2-15ರ ವೇಳೆಗೆ ಪಡುಬಿದ್ರಿಯ ಕಡಲ ಕಿನಾರೆಗೆ ಆಗಮಿಸಿದ ಮುಳುಗು ತಜ್ಞ ಈಶ್ವರ್ ಮಲ್ಪೆ, ಸಮುದ್ರಕ್ಕಿಳಿದು ಸುಮಾರು ಮೂರು ಮಾರು ದೂರಕ್ಕೆ ತೆರಳಿದರು. ಅಲ್ಲಿ ಯತೀಶ್ ಬಳಿ ತೆರಳಿದ ಈಶ್ವರ್ ಮಲ್ಪೆ, ಮಾನವಿಯತೆಯ ಮಾತುಗಳೊಂದಿಗೆ ಅವರ ಮನವೊಲಿಸಿದರು.
ಬಳಿಕ ಯತೀಶ್ ಅವರೊಂದಿಗೆ ಈಜುತ್ತಲೆ 3-15ರ ವೆಳೆಗೆ ದಡ ಸೇರಿದರು. ಈಶ್ವರ ಮಲ್ಪೆ ಅವರೊಂದಿಗೆ ಸ್ಥಳಿಯ ಈಜುಪಟುಗಳೂ, ಬ್ಲೂ ಫ್ಲ್ಯಾಗ್ ಬೀಚ್‌ನ ಲೈಫ್ ಗಾರ್ಡ್‌ಗಳಾದ ಪ್ರಜ್ವಲ್, ಸುಶಾಂತ್, ಬಾದಲ್ ಸಹಕರಿಸಿದ್ದರು. ಯತಿಶ್ ಬ್ಲೂ ಫ್ಲ್ಯಾಗ್ ಬೀಚ್‌ನಲ್ಲಿ ಲೈಫ್‌ಗಾರ್ಡ್ ವೃತ್ತಿಯಲ್ಲಿದ್ದವರಾಗಿದ್ದು, ಈ ಹಿಂದೆಯೂ ಒಂದೆರಡು ಬಾರಿ ಈ ರೀತಿಯ ದುಸ್ಸಾಹಸಕ್ಕೆಗೈದಿದ್ದರು.
ಸ್ಥಳದಲ್ಲಿ ಕರಾವಳಿ ಕಾವಲು ಪಡೆ ಪೊಲಿಸರು, ಗೃಹರಕ್ಷಕ ದಳದ ಸಿಬಂದಿ ಹಾಜರಿದ್ದರು. ಸದ್ಯ ಯತಿಶ್ ಅವರನ್ನು ಉಡುಪಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.






