ಸರಕಾರಿ ಶಾಲೆಗಳನ್ನು ಬಲಪಡಿಸಲು ಎಐಡಿಎಸ್‌ಓ ಆಗ್ರಹ

ಉಡುಪಿ, ಆ.17: ರಾಜ್ಯ ಸರಕಾರ ತನ್ನ ಹಠಮಾರಿ ಧೋರಣೆಯನ್ನು ಬಿಟ್ಟು ಜಿಲ್ಲೆಯಲ್ಲಿರುವ ಸರಕಾರಿ ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸಲು ಅದನ್ನು ಬಲಪಡಿಸುವಂತೆ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ಆಗ್ರಹಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಸಂಘಟನೆಯ ಜಿಲ್ಲಾ ಸಂಚಾಲಕ ವಿನಯ್‌ಚಂದ್ರ ಎಸ್.ವಿ., ಜಿಲ್ಲೆಯ ಕೆಪಿಎಸ್ ಶಾಲೆಗಳಿಗೆ ಸರಕಾರ ಆಶ್ವಾಸನೆ ನೀಡಿದಂತೆ ಸಾರಿಗೆ ವ್ಯವಸ್ಥೆಯನ್ನು ಮಾಡದೇ ವಿದ್ಯಾರ್ಥಿಗಳು ಶಾಲೆಗೆ ಬರಲು ಪರದಾಡುವಂತೆ ಮಾಡಿದೆ ಎಂದು ಹೇಳಿದ್ದಾರೆ.
ರಾಜ್ಯ ಸರಕಾರ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಇನ್ನೂ ಸಹ ಸಾರಿಗೆ ವ್ಯವಸ್ಥೆ ನೀಡದೆ ಇರುವುದರಿಂದ ಸಾವಿರಾರು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಕೆಪಿಎಸ್ ಶಾಲೆಗೆ ಸುಮಾರು 5 ಕಿ.ಮೀ ವಿಸ್ತೀರ್ಣದಲ್ಲಿ ಬರುವ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ, ಆ ಶಾಲೆಯ ಮಕ್ಕಳಿಗೆ ಸಾರಿಗೆ ವ್ಯವಸ್ಥೆಯನ್ನು ಇಲಾಖೆಯ ಮೂಲಕ ಮಾಡುವುದಾಗಿ ಹೇಳಲಾಗಿತ್ತು. ಆದರೆ ಇಲ್ಲಿಯವರೆಗೂ ಸಹ ಸೂಕ್ತವಾದ ಸಾರಿಗೆ ಕಲ್ಪಿಸಿಲ್ಲ ಎಂದವರು ದೂರಿದ್ದಾರೆ.
ಇದರಿಂದ ವಿದ್ಯಾರ್ಥಿಗಳು ಸ್ವತಃ ತಾವೇ ಹಣ ಖರ್ಚು ಮಾಡಿಕೊಂಡು ಶಾಲೆ ತಲುಪುವ ಅಥವಾ ಪಾಲಕರೇ ಮಕ್ಕಳನ್ನು ಕೆಪಿಎಸ್ ಶಾಲೆಗೆ ಕರೆದು ಕೊಂಡು ಹೋಗುವಂತಹ ಪರಿಸ್ಥಿತಿ ಎದುರಾಗಿದೆ. ಇದರಿಂದಾಗಿ ರಾಜ್ಯದಲ್ಲಿ 25,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಉಡುಪಿ ಜಿಲ್ಲೆಯಲ್ಲಿಯೇ 6,863ಕ್ಕೂ ಅಧಿಕ ವಿದ್ಯಾರ್ಥಿಗಳು ಸಾರಿಗೆ ವ್ಯವಸ್ಥೆ ಇಲ್ಲದೇ ಪರದಾಡು ವಂತಾಗಿದೆ ಎಂದವರು ವಿವರಿಸಿದ್ದಾರೆ.
ಸಾರಿಗೆ ವ್ಯವಸ್ಥೆ ಇಲ್ಲದೇ ಗುಡ್ಡಗಾಡು ಪ್ರದೇಶಗಳಿಂದ ವ್ಯಾಸಂಗಕ್ಕಾಗಿ ಬರುತ್ತಿರುವ ವಿದ್ಯಾರ್ಥಿಗಳು ತೀವ್ರ ಸಂಕಷ್ಟ ಎದುರಿಸುತಿದ್ದಾರೆ. ಅವರು ಶಿಕ್ಷಣದಿಂದಲೇ ಹೊರಗುಳಿಯುವ ಸ್ಥಿತಿಯನ್ನು ರಾಜ್ಯ ಸರಕಾರ ತಂದೊಡ್ಡಿದೆ. ರಾಜ್ಯ ಸರ್ಕಾರದ ಈ ಧೋರಣೆಯು ಖಂಡನೀಯ. ಸರ್ಕಾರಕ್ಕೆ ಕೆಪಿಎಸ್ ಕುರಿತಾದ ತನ್ನ ಹಠಮಾರಿ ಧೋರಣೆ ಬಿಟ್ಟು ನಮ್ಮೂರ ಸರ್ಕಾರಿ ಶಾಲೆಗಳನ್ನು ಬಲಪಡಿಸುವಂತೆ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯು ಹೇಳಿಕೆಯಲ್ಲಿ ಒತ್ತಾಯಿಸಿದೆ.






