ಕುಂದಾಪುರ ಸರಕಾರಿ ಆಸ್ಪತ್ರೆಗೆ ರೆಫ್ರಿಜರೇಟರ್ ಹಸ್ತಾಂತರ, ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ

ಕುಂದಾಪುರ, ಆ.17: ಸರಕಾರಿ ಆಸ್ಪತ್ರೆಗಳು, ಶಾಲೆಗಳು ಸೇರಿದಂತೆ ಸಾರ್ವಜನಿಕರಿಗೆ ಅಗತ್ಯವಿರುವ ಸರಕಾರಿ ವ್ಯವಸ್ಥೆಗಳ ಅಭಿವೃದ್ದಿಗೆ ಸರಕಾರದ ಜೊತೆಗೆ ಸಾಮಾಜಿಕ ಸಂಸ್ಥೆಗಳು, ಟ್ರಸ್ಟ್, ಫೌಂಡೇಷನ್ ಹಾಗೂ ದಾನಿಗಳು ನೆರವು ನೀಡಿ ಕೈಜೋಡಿಸಬೇಕು. ಆ ಮೂಲಕ ಜನಸಾಮಾನ್ಯರಿಗೆ ಮತ್ತಷ್ಟು ಉತ್ತಮ ಸೇವೆ ನೀಡಲು ಸಹಕಾರಿ ಯಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ ಹೇಳಿದ್ದಾರೆ.
ಖಿದ್ಮಾ ಫೌಂಡೇಶನ್ ಕುಂದಾಪುರ-ಬೈಂದೂರು ತಾಲೂಕು ವತಿಯಿಂದ ಸೋಮವಾರ ನಡೆದ ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ನೂತನ ರೆಫ್ರಿಜರೇಟರ್ ಹಸ್ತಾಂತರ ಹಾಗೂ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಸರಕಾರಿ ಆಸ್ಪತ್ರೆಗಳಲ್ಲಿ ಬಡ ಹಾಗೂ ರೋಗಿಗಳಿಗೆ ನೆರವು ನೀಡುವುದು ಶ್ಲಾಘನೀಯ ಕಾರ್ಯ. ಸಾಮಾನ್ಯ ಜನರ ಪಾಲಿಗೆ ಅಗತ್ಯವಿರುವ ಸರಕಾರಿ ಆಸ್ಪತ್ರೆ, ಶಾಲೆಗಳಿಗೆ ಸರಕಾರದಿಂದ ಕೆಲ ಸಂದರ್ಭಗಳಲ್ಲಿ ಬೇಕಿರುವ ಸೌಲಭ್ಯ ಗಳನ್ನು ಒದಗಿಸಲು ಅಸಾಧ್ಯವಾದಾಗ ಸಾಮಾಜಿಕ ಸಂಸ್ಥೆಗಳು ನೀಡುವ ನೆರವು ವ್ಯವಸ್ಥೆಯನ್ನು ಬಲಿಷ್ಠಗೊಳಿಸುವ ಮೂಲಕ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಸಹಕಾರಿಯಾಗುತ್ತದೆ. ಇದೇ ರೀತಿ ಸರಕಾರಿ ಶಾಲೆ ಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದರಿಂದ ವಿದ್ಯಾರ್ಥಿಗಳಿಗೂ ಪ್ರಯೋಜನವಾಗಲಿದೆ ಎಂದರು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪ್ರೇಮಾನಂದ ಮಾತನಾಡಿ, ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಅಗತ್ಯವಿರುವ ಹಲವು ಸೌಕರ್ಯಗಳನ್ನು ದಾನಿಗಳ ನೆರವಿನಿಂದ ಪಡೆಯಲಾಗಿದ್ದು, ಆಸ್ಪತ್ರೆಯ ಡ್ರಗ್ಸೊಟೇರ್ ಮೇಲ್ದರ್ಜೆಗೇರಿಸುವ ಪ್ರಯತ್ನ ನಡೆಯುತ್ತಿದ್ದು, ಔಷಧಿಗಳ ಸುರಕ್ಷಿತ ಸಂಗ್ರಹಣೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು. ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಹಾಗೂ ವಿವಿಧ ದಾನಿಗಳು ಆಸ್ಪತ್ರೆಯ ಅಭಿವೃದ್ಧಿಗೆ ನಿರಂತರವಾಗಿ ಸಹಕಾರ ನೀಡುತ್ತಿದ್ದು, ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಅವರ ಕೊಡುಗೆ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಡಾ.ನಾಗೇಶ್ ಮಾತನಾಡಿ, ಸಮಾಜದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರ ಪಾತ್ರವೂ ಮಹತ್ವದ್ದಾಗಿದೆ. ಆಸ್ಪತ್ರೆಯ ಹಳೆಯ ಕಟ್ಟಡ ಶಿಥಿಲಾವಸ್ಥೆ ಯಲ್ಲಿದ್ದು, ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಡಿಪಿಆರ್ ಸಿದ್ಧಪಡಿಸಿ, ಅಂದಾಜು ವೆಚ್ಚ ತಯಾರಿಸುವ ಕಾರ್ಯ ನಡೆಯುತ್ತಿದೆ. ಅಗತ್ಯ ಕಟ್ಟಡ ಹಾಗೂ ಮೂಲಸೌಕರ್ಯಗಳನ್ನು ನಿರ್ಮಿಸಿ, ಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯುವಂತೆ ವ್ಯವಸ್ಥೆಯನ್ನು ಬಲಪಡಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಖಿದ್ಮಾ ಫೌಂಡೇಶನ್ ಅಧ್ಯಕ್ಷ ಮೊಹಮ್ಮದ್ ರಫೀಕ್ ವಂಡ್ಸೆ ಮಾತನಾಡಿ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜದ ಅಗತ್ಯಗಳಿಗೆ ಸ್ಪಂದಿಸುವ ಕಾರ್ಯವನ್ನು ಸಂಸ್ಥೆ ನಿರಂತರವಾಗಿ ಮಾಡುತ್ತಿದೆ. ಕಳೆದ ಎರಡು ವರ್ಷಗಳಿಂದ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇದೇ ಆಸ್ಪತ್ರೆಯಲ್ಲಿಯೂ ಕಳೆದ ವರ್ಷ ವಿಶೇಷ ಸೇವಾ ಕಾರ್ಯಕ್ರಮ ನಡೆಸಲಾಗಿದೆ ಎಂದರು.
ಖಿದ್ಮಾ ಫೌಂಡೇಶನ್ ನಿಕಟಪೂರ್ವಾಧ್ಯಕ್ಷ ಅಬು ಮೊಹಮ್ಮದ್ ಶೇಖ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಸಂತೋಷ್ ಶೆಟ್ಟಿ ಬಲಾಡಿ, ದೇವಕಿ ಸಣ್ಣಯ್ಯ ಉಪಸ್ಥಿತರಿದ್ದರು. ಕುಂದಾಪುರ ಪುರಸಭೆ ಮಾಜಿ ಸದಸ್ಯ ಅಬು ಮೊಹಮ್ಮದ್ ಮುಜಾವರ್ ಸ್ವಾಗತಿಸಿದರು. ಖಿದ್ಮಾ ಫೌಂಡೇಶನ್ ಕಾರ್ಯದರ್ಶಿ ಎನ್.ಮೊಹಮ್ಮದ್ ಅಸ್ಲಾಂ ನಿರೂಪಿಸಿ, ವಂದಿಸಿದರು.






