ಮಲ್ಪೆ: ಸ್ವಯಂಪ್ರೇರಿತ ರಕ್ತದಾನ ಶಿಬಿರ, ನಿವೃತ್ತ ಯೋಧರಿಗೆ ಸನ್ಮಾನ

ಮಲ್ಪೆ, ಆ.17: ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ, ಮಲ್ಪೆ ಘಟಕ ಹಾಗೂ ಮಹಿಳಾ ಸಂಘಟನೆ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ನೇತೃತ್ವದಲ್ಲಿ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ರೋಟರಿ ಕ್ಲಬ್ ಕಲ್ಯಾಣಪುರ ಹಾಗೂ ರೋಟರಿ ಮಲ್ಪೆ ಕರಾವಳಿ, ರಕ್ತ ನಿಧಿ ವಿಭಾಗ ಕೆಎಂಸಿ ಮಣಿಪಾಲ ಮತ್ತು ಜಿಲ್ಲಾಡಳಿತ ಉಡುಪಿ ಜಿಲ್ಲೆ, ಜ್ಞಾನ ಜ್ಯೋತಿ ಭಜನಾ ಮಂದಿರ ಕಡಲತೀರ ಮಲ್ಪೆ, ಹನುಮಾನ್ ವಿಠೋಭ ಭಜನಾ ಮಂದಿರ ಹನುಮಾನ್ ನಗರ ಮಲ್ಪೆ ಇವುಗಳ ಸಂಯುಕ್ತ ಆಶ್ರಯದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಮಲ್ಪೆ ಸರಕಾರಿ ಪದವಿ ಪೂರ್ವ ಕಾಲೇಜು ಸಭಾಭವನದಲ್ಲಿ ರವಿವಾರ ಆಯೋಜಿಸಲಾಗಿತ್ತು.
ಶಿಬಿರವನ್ನು ಉದ್ಘಾಟಿಸಿದ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ರಕ್ತದಾನವು ಅಗತ್ಯವಿರುವ ರೋಗಿಗಳ ಜೀವ ಉಳಿಸುವ ಮಹತ್ವದ ಕಾರ್ಯವಾಗಿದೆ. ಒಬ್ಬ ರಕ್ತದಾನ ಮಾಡುವುದರಿಂದ ನಾಲ್ಕು ಜನರ ಜೀವ ಉಳಿಸಬಹುದು. ಯುವಜನತೆ ರಕ್ತದಾನ ಮಾಡಿದರೆ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಆಸ್ಪತ್ರೆಯವರು ಒದಗಿಸಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ 80ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಿವೃತ್ತ ಯೋಧ ಸಂತೋಷ್ ಶ್ರೀಯಾನ್ ಅವರನ್ನು ಸನ್ಮಾನಿಸಲಾಯಿತು. ಮಲ್ಪೆ ಮಹಿಳಾ ಸಂಘಟನೆಯ ಅಧ್ಯಕ್ಷೆ ಸಂಪ್ರೀತಾ ರೋಹಿತ್ ಅಧ್ಯಕ್ಷತೆ ವಹಿಸಿದ್ದರು.
ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ರವೀಶ್ ಕೊರವಡಿ, ನಿಕಟಪೂರ್ವ ಅಧ್ಯಕ್ಷರಾದ ಜಯಂತ್ ಅಮೀನ್, ಕಾರ್ಯದರ್ಶಿ ಶೇಖರ್ ತೋಳಾರ್, ರೋಟರಿ ಮಲ್ಪೆ ಕರಾವಳಿಯ ಅಧ್ಯಕ್ಷ ಸುರೇಶ್ ಕರ್ಕೇರ, ರೋಟರಿ ಕಲ್ಯಾಣ ಪುರದ ಮಾಜಿ ಅಧ್ಯಕ್ಷ ರಾಮ ಪೂಜಾರಿ, ಹನುಮಾನ್ ವಿಠೋಭ ಭಜನಾ ಮಂದಿರದ ಅಧ್ಯಕ್ಷ ರವಿ ಕಾಂಚನ್, ಬಡಗಬೆಟ್ಟು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ರಾಜೇಶ್ ಶೇರಿಗಾರ್, ಕೆಎಂಸಿ ಮಣಿಪಾಲದ ಡಾ.ಓಜಸ್ವಿ ಉಪಸ್ಥಿತರಿದ್ದರು.
ಬಡಗಬೆಟ್ಟು ಸೊಸೈಟಿ ಮಲ್ಪೆ ಶಾಖಾ ಮುಖ್ಯಸ್ಥ ನವೀನ್ ಕೆ. ಸ್ವಾಗತಿಸಿದರು. ಮಹೇಶ್ ಕುಮಾರ್ ವಂದಿಸಿದರು. ಯಶೋದ ಕೇಶವ್ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ಸುಮಾರು 30ಕ್ಕೂ ಹೆಚ್ಚು ಮಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.






