ಅಕ್ಟೋಬರ್‌ನಿಂದ ಗೃಹಲಕ್ಷ್ಮೀ ಯೋಜನೆಯ ಪರಿಷ್ಕರಣೆ: ಹರಿಪ್ರಸಾದ್ ಶೆಟ್ಟಿ

ಕುಂದಾಪುರ, ಆ.18: ಮುಂದಿನ ಅಕ್ಟೋಬರ್‌ನಿಂದ ಗೃಹಲಕ್ಷ್ಮೀ ಯೋಜನೆಯ ಪರಿಷ್ಕರಣೆ ಕಾರ್ಯ ನಡೆಯಲಿದ್ದು, ಸಂಬಂಧಪಟ್ಟವರು ತಮ್ಮ ಆಧಾರ ಕಾರ್ಡ್ ಅಪ್ಡೇಟ್ ಮಾಡಿ ಇಟ್ಟುಕೊಂಡರೆ ಪರಿಷ್ಕರಣೆಗೆ ಅನುಕೂಲವಾಗಲಿದೆ. ಸದಸ್ಯರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆಧಾಕಾರ್ಡ್ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು ಎಂದು ಕುಂದಾಪುರ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಅಧ್ಯಕ್ಷ ಎಚ್. ಹರಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.
ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಗೃಹಲಕ್ಷ್ಮೀ ಯೋಜನೆಯಲ್ಲಿ ಕುಂದಾಪುರ ತಾಲೂಕಿನಲ್ಲಿ ಸುಮಾರು 1705 ಮರಣ ಹೊಂದಿದವರ ಖಾತೆಗೆ ಸುಮಾರು 50 ಲಕ್ಷ ರೂ. ಜಮೆ ಆಗಿದ್ದು, ಈ ಪೈಕಿ 16 ಲಕ್ಷ ರೂ.ಗಳನ್ನು ಬ್ಯಾಂಕ್ ಖಾತೆಯಿಂದ ಡ್ರಾ ಮಾಡಿ ಕೊಂಡಿದ್ದಾರೆ. 13 ಲಕ್ಷ ರೂ.ಗಳನ್ನು ಫ್ರೀಜ್ ಮಾಡಲಾಗಿದ್ದು, 19 ಲಕ್ಷ ರೂ. ವಾಪಾಸ್ ಸಂಬಂಧಪಟ್ಟ ಇಲಾಖೆಯ ಖಾತೆಗೆ ಜಮೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಗೃಹಜ್ಯೋತಿ ಪರಿಷ್ಕರಣೆ: ಗೃಹಜ್ಯೋತಿ ಯೋಜನೆಯಡಿ ಪರಿಷ್ಕರಣೆ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಬಾಕಿ ಉಳಿದ ಪುರ್ನ ನೊಂದಣಿ ಕಾರ್ಯವನ್ನು ಅತಿ ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು. ಕೆವೈಸಿ ಅಪ್ಡೇಟ್ ಆಗದಿರು ವುದರಿಂದ ಸಮಸ್ಯೆಯಾಗುತ್ತಿದೆ ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಗೃಹಜ್ಯೋತಿ ಯೋಜನೆಯ ಪರಿಷ್ಕರಣೆ ನಡೆಯುತ್ತಿದ್ದು, ಸಂಬಂಧಪಟ್ಟ ಇಲಾಖೆ ಯವರು ಬಹಳ ಯಶಸ್ವಿಯಾಗಿ ಪರಿಷ್ಕರಣೆ ಕಾರ್ಯ ನಡೆಸಿದ್ದಾರೆ. ಪರಿಷ್ಕರಣೆಗೆ ಬಾಕಿ ಉಳಿದವುಗಳನ್ನು ಇಲಾಖೆಯವರು ಸ್ಥಳೀಯ ಮುಖಂಡರ ಜೊತೆ ಸೇರಿ ಮಾಡಲಿದ್ದಾರೆ ಎಂದು ತಿಳಿಸಿದರು.
ಅನ್ನಭಾಗ್ಯ ಯೋಜನೆಯಡಿ ಪ.ಜಾತಿ/ಪ.ಕುಟುಂಬದವರಿಗೆ ಜಾತಿ ಪ್ರಮಾಣ ಪತ್ರ ಇಲ್ಲದೆ ಪಡಿತರ ನೀಡುತ್ತಿಲ್ಲ. ಅರ್ಹ ಪ.ಜಾತಿ/ಪ.ಕುಟುಂಬದವರಿಗೆ ಜಾತಿ ಪ್ರಮಾಣ ಪತ್ರ ನೀಡಲು ಇಲಾಖೆ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಮೊದಲು ಅರ್ಜಿ ಹಾಕಿದವರಿಗೆ ಮಾತ್ರ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ ಎಂದು ಸದಸ್ಯ ವಸುಂಧರ ಹೆಗ್ಡೆ ದೂರಿದರು.
‘ಹಾಲಾಡಿ, ಶಂಕರನಾರಾಯಣ ಭಾಗದಲ್ಲಿ ಇಂತಹ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಪ.ಜಾತಿ/ಪ.ವರ್ಗದ ಮುಖಂಡರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿ ಸುರೇಶ ಮಾಹಿತಿ ನೀಡಿದರು.
ಬಸ್ ಸಂಚಾರಕ್ಕೆ ಆಗ್ರಹ: ಕೊಲ್ಲೂರಿಗೆ ಬೇರೆ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಸುಗಳು ಬರುತ್ತಿದ್ದು, ನಮ್ಮ ರಾಜ್ಯದ ಬಸ್ಸುಗಳ ಸಂಚಾರ ವಿರಳವಾಗಿದೆ. ಕೊಲ್ಲೂರಿಗೆ ಹೆಚ್ಚಿನ ಕೆಎಸ್‌ಆರ್‌ಟಿಸಿ ಬಸ್ಸುಗಳ ಸಂಚಾರ ಆರಂಭಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.
ಪ್ರಸ್ತುತ ಸ್ಥಿತಿಯಲ್ಲಿ ಕುಂದಾಪುರ ಡಿಪೋದಿಂದ ಯಾವುದೇ ಹೊಸ ಬಸ್ ಓಡಿಸುವ ಸ್ಥಿತಿ ಇಲ್ಲ. ಶಕ್ತಿ ಯೋಜನೆ ಬಂದ ಬಳಿಕ ಸರಕಾರಿ ಬಸ್ಸುಗಳಲ್ಲಿ ಹೆಚ್ಚಿನ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಇದಕ್ಕೂ ಮೊದಲು ಜನ ಇಲ್ಲ ಎಂಬ ಕಾರಣಕ್ಕೆ ಹಲವು ಮಾರ್ಗಗಳಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸ ಲಾಗಿತ್ತು ಎಂದು ಡಿಪೋ ಮ್ಯಾನೇಜರ್ ಉದಯ ಶೆಟ್ಟಿ ಹೇಳಿದರು.
ಆಲೂರು- ಹಕ್ಲಾಡಿ ಹೊಸ ಪರವಾನಿಗೆ, ಹೇರಿಕುದ್ರು ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆ ಹಾಗೂ ಅಮಾಸೆಬೈಲಿನ ಬಸ್ ನಿಗದಿತ ಸಮಯಕ್ಕೆ ಓಡಿಸುವ ಕುರಿತು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸೂಕ್ತ ತೀರ್ಮಾನ ಕೈಗೊಂಡಿದ್ದಾರೆ ಎಂದು ಅಧ್ಯಕ್ಷರು ತಿಳಿಸಿದರು.
ಗೃಹಲಕ್ಷ್ಮೀ ಯೋಜನೆಯಡಿ ಸದ್ಯ ಯಾವುದೇ ಹೊಸ ಅರ್ಜಿಯನ್ನು ಸ್ವೀಕರಿಸಲಾಗುತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರೇಖಾ ಹೇಳಿದರು.
‘ಜುಲೈ ತಿಂಗಳಿನಲ್ಲಿ ಗೃಹಲಕ್ಷ್ಮೀ ಯೋಜನೆಯಲ್ಲಿ 3.93 ಕೋಟಿ ರೂ., ಅನ್ನಭಾಗ್ಯ ಯೋಜನೆಯಲ್ಲಿ 5.55 ಕೋಟಿ ರೂ., ಯುವನಿಧಿ ಯೋಜನೆಯಲ್ಲಿ 5.34 ಲಕ್ಷ ರೂ., ಶಕ್ತಿ ಯೋಜನೆಯಲ್ಲಿ 3.23 ಕೋಟಿ ರೂ., ಗೃಹಜ್ಯೋತಿ ಯೋಜನೆಯಲ್ಲಿ 4.63 ಕೋಟಿ ರೂ. ಬಿಡುಗಡೆಯಾಗಿದೆ. ಜುಲೈ ತಿಂಗಳಲ್ಲಿ ಒಟ್ಟು 19.32 ಕೋಟಿ ರೂ. ಬಿಡುಗಡೆಯಾಗಿದ್ದು, ಇಲ್ಲಿನ ತನಕ ತಾಲೂಕಿಗೆ ಒಟ್ಟು 6,12,09, 29, 984 ರೂ. ಬಿಡುಗಡೆಯಾಗಿದೆ’
-ಎಚ್.ಹರಿಪ್ರಸಾದ್ ಶೆಟ್ಟಿ, ಅಧ್ಯಕ್ಷರು






