ಉಡುಪಿ ಜಿಲ್ಲೆಯಲ್ಲಿ ಮತ್ತೆ ಬಿರುಸು ಪಡೆದ ಮಳೆ| ಬೈಂದೂರು: ಜಾನುವಾರು ಕೊಟ್ಟಿಗೆಗೆ ಹಾನಿ

ಉಡುಪಿ, ಆ.19: ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಮಂಗಳವಾರದ ಬಳಿಕ ಮಳೆಯಲ್ಲಿ ಬಿರುಸು ಕಂಡುಬಂದಿದ್ದು, ಇಂದು ಸಹ ಅದು ಮುಂದುವರಿದಿದೆ. ಹೆಬ್ರಿ ತಾಲೂಕಿನಾದ್ಯಂತ ಬುಧವಾರ ಭಾರೀ ಮಳೆ ಸುರಿಯುತಿದ್ದು, ತಗ್ಗು ಪ್ರದೇಶಗಳೆಲ್ಲವೂ ನೀರಿನಿಂದ ಆವೃತ್ತವಾಗಿದೆ. ತೋಡು, ಹಳ್ಳಗಳು ಮತ್ತೆ ತುಂಬಿ ಹರಿಯುತ್ತಿವೆ.
ಅಪರಾಹ್ನದ ಬಳಿಕ ಉಡುಪಿ, ಬ್ರಹ್ಮಾವರ, ಕುಂದಾಪುರ, ಕಾಪು ತಾಲೂಕುಗಳಲ್ಲೂ ಭಾರೀ ಮಳೆ ಸುರಿಯುತ್ತಿದೆ. ನಗರ ಪ್ರದೇಶಗಳಲ್ಲಿ ರಸ್ತೆಯಲ್ಲೇ ನೀರು ಹರಿಯುತ್ತಿದೆ. ಇದರಿಂದ ಪಾದಾಚಾರಿಗಳು, ವಾಹನಗಳ ಚಾಲಕರು ಪರದಾಡುವಂತಾಯಿತು.
ಬೈಂದೂರು ತಾಲೂಕಿನ ನಾವುಂದ ಗ್ರಾಮದ ಪಾರ್ವತಿ ಶೆಟ್ಟಿ ಅವರ ಜಾನುವಾರು ಕೊಟ್ಟಿಗೆಗೆ ಮಳೆಯಿಂದ ಭಾಗಶ: ಹಾನಿಯಾಗಿದೆ. ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 43.8ಮಿ.ಮೀ. ಮಳೆಯಾಗಿದೆ.
ಜಿಲ್ಲೆಯ ಕಾಪುವಿನಲ್ಲಿ ಅತ್ಯಧಿಕ 57.4ಮಿ.ಮೀ. ಮಳೆಯಾಗಿದೆ. ಉಳಿದಂತೆ ಕಾರ್ಕಳದಲ್ಲಿ 52.0, ಉಡುಪಿಯಲ್ಲಿ 50.9, ಬ್ರಹ್ಮಾವರದಲ್ಲಿ 48.8, ಹೆಬ್ರಿಯಲ್ಲಿ 38.5, ಕುಂದಾಪುರದಲ್ಲಿ 36.6 ಹಾಗೂ ಬೈಂದೂರಿನಲ್ಲಿ 36.2ಮಿ.ಮೀ.ಮಳೆಯಾದ ವರದಿ ಬಂದಿದೆ.






