ವಿವೇಕಾನಂದರ ಚಿಂತನೆ; ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆ; ಸ್ವಾಮಿ ಅನುಪಮಾನಂದಜಿ

ಉಡುಪಿ, ಆ.21: ಮಹಾತ್ಮ ಗಾಂಧಿ, ಭಗತ್ ಸಿಂಗ್, ಬಾಲಗಂಗಾಧರ ತಿಲಕ್, ಅರವಿಂದ್ ಘೋಷ್ ಮುಂತಾದ ಎಲ್ಲಾ ವರ್ಗಗಳ ಸ್ವಾತಂತ್ರ್ಯ ಹೋರಾಟಗಾರರು ವಿವೇಕಾನಂದರ ಚಿಂತನೆಗಳಿಂದ ಪ್ರೇರಿತರಾಗಿದ್ದರು ಎಂದು ಕಡಪ ರಾಮಕೃಷ್ಣ ಮಿಷನ್‌ನ ಮುಖ್ಯಸ್ಥ ಸ್ವಾಮಿ ಅನುಪಮಾನಂದಜಿ ಹೇಳಿದ್ದಾರೆ.
ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಐಕ್ಯೂ ಎಸಿ ಹಾಗೂ ರಾಜ್ಯಶಾಸ್ತ್ರ ವಿಭಾಗ ಗಳು, ಮಂಗಳೂರು ವಿಶ್ವವಿದ್ಯಾನಿಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಸ್ವಾಮಿ ವಿವೇಕಾನಂದ: ಭಾರತದ ಸ್ವಾತಂತ್ರ್ಯ ಚಳುವಳಿಯ ಸ್ಪೂರ್ತಿದಾಯಕ ಶಕ್ತಿ’ ಎಂಬ ವಿಶೇಷ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡು ತಿದ್ದರು.
ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ವಾಮಿ ವಿವೇಕಾನಂದರು ಮುಖ್ಯ ಆಧ್ಯಾತ್ಮಿಕ ಮತ್ತು ಸಂಘಟನಾತ್ಮಕ ಸ್ಫೂರ್ತಿ ಯಾಗಿದ್ದರು. ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ವಿವೇಕವಾಣಿ ರಾಷ್ಟ್ರೀಯವಾದಿಗಳಲ್ಲಿ ನಿರ್ಭೀತ ನಡೆಗೆ ಕಾರಣವಾಯಿತು ಸ್ವಾಮಿ ಅನುಪಮಾನಂದಜಿ ಅಭಿಪ್ರಾಯಪಟ್ಟರು.
ವೈವಿಧ್ಯತೆಯನ್ನು ಫೋಷಿಸಿ, ವೈಷಮ್ಯಗಳನ್ನು ದೂರ ಮಾಡಿ ಸಾಮಾಜಿಕ ನ್ಯೂನತೆಗಳನ್ನು ಹೋಗಲಾಡಿಸಿ ಐಕ್ಯತೆ ಯನ್ನು ಸಾಧಿಸುವ ಮತ್ತು ಸ್ವಾತಂತ್ರ್ಯವನ್ನು ಗಳಿಸುವ ಪ್ರಭುದ್ಧ ರಾಷ್ಟ್ರೀಯವಾದಿ ವಿವೇಕಾನಂದರಾಗಿದ್ದರು ಎಂದೂ ಸ್ವಾಮಿ ಅನುಪಮಾನಂದಜಿ ನುಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಇಜಿನ ಪ್ರಾಂಶುಪಾಲ ಪ್ರೊ.ನಿತ್ಯಾನಂದ ವಿ ಗಾಂವ್ಕರ್ ಮಾತನಾಡಿ, ಇಂದಿನ ಯುವ ಜನತೆ ವಿವೇಕಾನಂದರ ವೈಚಾರಿಕ ಚಿಂತನೆಗಳನ್ನು ಅರ್ಥೈಸಿಕೊಳ್ಳಬೇಕಾದ ಅಗತ್ಯತೆಯನ್ನು ತಿಳಿಸಿದರು. ಮಂಗಳೂರು ವಿವಿ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕ ರಾದ ಡಾ.ಚಂದ್ರು ಹೆಗಡೆ ವಿವೇಕಾನಂದ ಅಧ್ಯಯನ ಕೇಂದ್ರದ ಉದ್ದೇಶಗಳನ್ನು ವಿವರಿಸಿ ಸ್ವಾಗತಿಸಿದರು.
ಕಾಲೇಜಿನ ಅರ್ಥಶಾಸ್ತ್ರ ಸಹ ಪ್ರಾಧ್ಯಾಪಕಿ ಡಾ.ಜಯಮಂಗಳ, ಗ್ರಂಥ ಪಾಲಕರಾದ ಕೃಷ್ಣ ಸಾಸ್ತಾನ, ಕನ್ನಡ ಸಹಾಯಕ ಪ್ರಾಧ್ಯಾಪಕ ಮಾರುತಿ, ಸಂಖ್ಯಾಶಾಸ್ತ್ರ ಪ್ರಾಧ್ಯಾಪಕ ಉಮೇಶ್ ಪೈ, ರಾಜ್ಯಶಾಸ್ತ್ರ ಉಪನ್ಯಾಸ ಆರತಿ ಜಿ, ಇತಿಹಾಸ ಉಪನ್ಯಾಸಕಿ ಹರಿಣಾಕ್ಷಿ ಇನ್ನಿತರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರಘು ನಾಯ್ಕ್ ವಂದಿಸಿದರೆ, ರಾಜ್ಯಶಾಸ್ತ್ರ ಸಹಪ್ರಾಧ್ಯಾಪಕ ಪ್ರಶಾಂತ್ ನೀಲಾವರ ಕಾರ್ಯಕ್ರಮ ನಿರೂಪಿಸಿದರು.






