ರೈತರ ಬಂದೂಕು ಠಾಣೆಯಲ್ಲಿ ಜಮಾ ಮಾಡಲು ಆದೇಶ: ಭಾಕಿಸಂ ವಿರೋಧ

ಉಡುಪಿ, ಆ.21: ಸರಿಯಾದ ಕಾರಣ ಇಲ್ಲದೆ, ರೈತರ ಬಂದೂಕುಗಳನ್ನು ಪೋಲೀಸ್ ಠಾಣೆಗಳಲ್ಲಿ ಜಮಾ ಮಾಡು ವಂತೆ ಸೂಚಿಸಿರುವ ಜಿಲ್ಲಾಡಳಿತದ ಕ್ರಮಕ್ಕೆ ಉಡುಪಿ ಜಿಲ್ಲಾ ಭಾ.ಕಿ.ಸಂ. ವಿರೋಧ ವ್ಯಕ್ತಪಡಿಸಿದೆ.
ಜಿಲ್ಲೆಯಲ್ಲಿ ಪರವಾನಿಗೆ ಸಹಿತ ಬಂದೂಕು ಹೊಂದಿರುವ ರೈತರಿಗೆ ಕಳೆದ ಒಂದು ವಾರದಿಂದ ಸ್ಥಳೀಯ ಪೋಲೀಸ್ ಠಾಣೆಯಿಂದ ದೂರವಾಣಿ ಕರೆಗಳು ಬರುತ್ತಿದ್ದು, ಕೂಡಲೇ ನಿಮ್ಮ ಬಂದೂಕನ್ನು ಡೆಪಾಸಿಟ್ ಮಾಡುವಂತೆ ತಿಳಿಸಲಾ ಗುತ್ತಿದೆ. ಇದು ಚುನಾವಣೆ ಸಮಯದಲ್ಲಿ ಸರ್ವೇ ಸಾಮಾನ್ಯ ಆಗಿದ್ದರೂ, ಈಗ ಯಾವುದೇ ಚುನಾವಣೆಯೂ ಇಲ್ಲದಿ ರುವಾಗ ಏಕಾಎಕಿ ಡೆಪಾಸಿಟ್‌ಗೆ ಕಾರಣ ಕೇಳಿದರೆ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಂದ ಆದೇಶ ಬಂದಿರುವುದಾಗಿ ತಿಳಿಸುತ್ತಿದ್ದಾರೆ ಎಂದು ಭಾಕಿಸಂ ಪ್ರಕಟಣೆಯಲ್ಲಿ ತಿಳಿಸಿದೆ.
ಆದರೆ ಮಳೆಗಾಲದ ಮುಕ್ತಾಯ ಹಂತದಲ್ಲಿರುವ ಈ ಸಂದರ್ಭದಲ್ಲಿ ಕಾಡುಗಳಲ್ಲಿ ಕೂಡ ಹಣ್ಣು ಹಂಪಲು ಲಭ್ಯ ಇಲ್ಲದೇ ಇರುವುದರಿಂದ ಮಂಗ, ಹಂದಿ ಮೊದಲಾದ ಕಾಡುಪ್ರಾಣಿಗಳ ಉಪಟಳ ಕೃಷಿಗೆ ಅತ್ಯಧಿಕವಾಗಿದೆ. ಪ್ರತೀ ನಿತ್ಯ ಅವುಗಳನ್ನು ಕಾದು ಓಡಿಸುವುದು ರೈತರಿಗೆ ಈ ಸಮಯದ ಮುಖ್ಯ ಕೆಲಸವಾಗಿದೆ ಎಂದು ಭಾಕಿಸಂ ತಿಳಿಸಿದೆ.
ಹಾಗಿರುವಾಗ ಪರವಾನಿಗೆ ಸಹಿತವಾಗಿ, ಕಾಡುಪ್ರಾಣಿಗಳನ್ನು ಬೆದರಿಸಲು ಮಾತ್ರ ಬಳಕೆ ಮಾಡುವ ಈ ಬಂದೂಕು ಗಳನ್ನು ಡೆಪಾಸಿಟ್ ಮಾಡಿ ಕೊಂಡಲ್ಲಿ, ರೈತರ ಬೆಳೆದು ನಿಂತಿರುವ ಭತ್ತ, ತೆಂಗು, ಅಡಿಕೆ, ಬಾಳೆ ಮೊದಲಾದ ಬೆಳೆಗಳನ್ನು ಉಳಿಸಿಕೊಳ್ಳುವುದು ಕಷ್ಟ ಆಗುತ್ತದೆ. ಬೆಳೆದು ನಿಂತ ಫಸಲು ರೈತರ ಮನೆ ತಲುಪದಂತೆ ಆಗುವಲ್ಲಿ ಈ ಆದೇಶ ಕಾರಣವಾಗುತ್ತದೆ.
ಜಿಲ್ಲೆಯಲ್ಲಿ ಸಾಕಷ್ಟು ಅಕ್ರಮ ಬಂದೂಕುಗಳಿದ್ದು, ಪ್ರಾಣಿ ಬೇಟೆಯ ಕುರಿತಂತೆ ಅಲ್ಲಲ್ಲಿ ದೂರುಗಳು ಕೇಳಿ ಬರುತ್ತಿ ದ್ದರೂ, ಅದರ ವಿರುದ್ಧ ಯಾವುದೇ ಕ್ರಮತೆಗೆದುಕೊಳ್ಳದ ಪೋಲೀಸ್ ಇಲಾಖೆ, ಕೇವಲ ಪ್ರಾಣಿಗಳನ್ನು ಬೆದರಿಸಿ, ತಮ್ಮ ಬೆಳೆ ರಕ್ಷಿಸಿಕೊಳ್ಳಲು ಹೆಣಗಾಡುವ ರೈತರ ಮೇಲೆ ಮಾತ್ರ ಸವಾರಿ ಮಾಡುತ್ತಿದೆ ಎಂದು ಭಾಕಿಸಂ ಟೀಕಿಸಿದೆ.
ಜಿಲ್ಲಾಡಳಿತ, ಪೋಲೀಸ್, ಅರಣ್ಯ, ವನ್ಯಜೀವಿ ಮೊದಲಾದ ಇಲಾಖೆ ಗಳಿಗೆ ಅಲೆದು ಅಲೆದು ಕಷ್ಟಪಟ್ಟು ಪರವಾನಿಗೆ ಪಡೆದು, ಕಾಲಕಾಲಕ್ಕೆ ಸಾವಿರಾರು ರೂ. ಹಣ ಕಟ್ಟಿ ನವೀಕರಣ ಮಾಡುವಾಗ ಬಂದೂಕೆ ಸಾಕೆನ್ನು ವಷ್ಟು ರೈತರಿಗೆ ಆಗುತ್ತದೆ. ವರ್ಷಕೊಮ್ಮೆ ಪೋಲೀಸ್ ತಪಾಸಣೆ, ಚುನಾವಣೆ ಸಂಧರ್ಭದಲ್ಲಿ ಪೋಲೀಸ್ ಠಾಣಿಯಲ್ಲಿ ಠೇವಣಿ ಇಟ್ಟು, ದುರಸ್ಥಿ ಮೊದಲಾದ ಕಾರಣಕ್ಕೆ ಸಾಕಷ್ಟು ಹಣವನ್ನು ವ್ಯಯಮಾಡಿಕೊಂಡು ಬರುತ್ತಿರುವ ರೈತರಿಗೆ ವಿನಾಕಾರಣ ಈ ತೊಂದರೆ ಸರಿಯಲ್ಲ ಎಂದು ಅದು ಹೇಳಿದೆ.
ಎರಡು- ಮೂರು ತಿಂಗಳ ಹಿಂದಷ್ಟೇ ಎಲ್ಲಾ ಬಂದೂಕು ಹೊಂದಿರುವ ರೈತರನ್ನು ಠಾಣೆಗೆ ಕರೆಸಿಕೊಂಡು ಕಡ್ಡಾಯ ವಾಗಿ ತಪಾಸಣೆ ನಡೆಸಿರುವ ಪೋಲೀಸ್ ಇಲಾಖೆ, ಪುನಃ ಬಂದೂಕನ್ನು ಡೆಪಾಸಿಟ್ ಇಡುವಂತೆ ಹೇಳುತ್ತಿರುವುದಕ್ಕೆ ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಠೇವಣಿ ಮಾಡಿಸಿಕೊಂಡದ್ದೇ ಆದಲ್ಲಿ ಅದರಿಂದ ರೈತರಿಗೆ ಉಂಟಾಗುವ ಬೆಳೆ ನಷ್ಟಕ್ಕೆ ಜಿಲ್ಲಾಡಳಿತ ಹಾಗೂ ಪೋಲೀಸ್ ಇಲಾಖೆಯನ್ನು ನೇರವಾಗಿ ಹೊಣೆ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ ಪೋಲೀಸ್ ಇಲಾಖೆ ಬಂದೂ ಕನ್ನು ಹಿಂದಿರುಗಿಸುವವರೆಗೆ ರೈತರ ಬೆಳೆ ಕಾಯಲು ತಮ್ಮ ಸಿಬ್ಬಂದಿಗಳನ್ನು ಕಳುಹಿಸಿಕೊಡಬೇಕು ರೈತ ಸಂಘಟನೆ ತಾಕೀತು ಮಾಡಿದೆ.
ಅರಣ್ಯ, ಪೋಲೀಸ್ ಮೊದಲಾದ ಇಲಾಖೆಗಳು ರೈತರ ಮೇಲೆ ಇದೇ ರೀತಿ ತಮ್ಮ ನಿಲುವನ್ನು ಮುಂದುವರಿಸಿದಲ್ಲಿ ಹೋರಾಟ ಮಾಡುವುದು ನಮಗೆ ಅನಿವಾರ್ಯ ಆಗುತ್ತದೆ ಎಂದು ಸಂಘದ ಪ್ರಕಟಣೆಯಲ್ಲಿ ಎಚ್ಚರಿಸಿದೆ.
ಈ ಬಗ್ಗೆ ಜಿಲ್ಲೆಯ ಸಂಸದರು, ಶಾಸಕರುಗಳಿಗೂ ಮನವಿ ಮಾಡಿದ್ದು, ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಈಗಾಗಲೇ ಎಸ್ಪಿ ಮತ್ತು ಡಿಸಿ ಅವರಿಗೆ ಪತ್ರ ಬರೆದು ಸ್ಪಷ್ಟೀಕರಣ ಕೇಳಿದ್ದು, ಎಲ್ಲಾ ಶಾಸಕರು ಸ್ಪಂದಿಸುವ ಭರವಸೆ ನೀಡಿದ್ದಾರೆ. ಜಿಲ್ಲಾಧಿಕಾರಿಯವರಿಗೂ ಈ ಕುರಿತು ತುರ್ತು ಮನವಿ ಮಾಡಲಾಗಿದೆ ಎಂದು ಭಾಕಿಸಂನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






