ಡೇವಿಡ್ ಡಿಸೋಜ ಶೂಟೌಟ್ ಪ್ರಕರಣ: ಕೃತ್ಯಕ್ಕೆ ಬೈಕ್ ಒದಗಿಸಿದ ಆರೋಪಿ ಬಂಧನ

ಉಡುಪಿ, ಆ.21: ಮುದರಂಗಡಿ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಶೂಟೌಟ್ ಪ್ರಕರಣದಲ್ಲಿ ಬೈಕ್ ಒದಗಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 9ಕ್ಕೇರಿದೆ.
ಬೈಂದೂರು ಬಾಳಿಹಿತ್ಲು ನಿವಾಸಿ ಲೋಕೇಶ್ ತೇಜ ಕೊಠಾರಿ(42) ಬಂಧಿತ ಆರೋಪಿ. ಈತ ಈ ಮೊದಲು ಮುಂಬಯಿಯಲ್ಲಿ ಕೆಲಸ ಮಾಡಿ ಕೊಂಡಿದ್ದು, ಆಗ ಅಲ್ಲಿ ಈ ಪ್ರಕರಣದ ಆರೋಪಿ ಕಿಶೋರ್ ರಾಮ ಪೂಜಾರಿ ಪರಿಚಯವಾಗಿ ಸ್ನೇಹಿತನಾಗಿದ್ದನು.
ಲೋಕೇಶ್ ಈ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದ ಆರೋಪಿ ಗಳಾದ ಅನ್ಮೋಲ್ ರಸ್ತೋಗಿ ಹಾಗೂ ರಾಜುಗೆ ಬೈಕ್ ಒದಗಿಸಿ ಇತರೇ ಆರೋಪಿಗಳೊಂದಿಗೆ ಸೇರಿ ಕೊಲೆ ನಡೆಸಲು ಒಳಸಂಚು ರೂಪಿಸಿದ್ದನು. ಆರೋಪಿಗಳಿಗೆ ಬೈಕ್‌ಗಳನ್ನು ಒದಗಿಸುವ ಮೂಲಕ ಆತ ಕೃತ್ಯದಲ್ಲಿ ಭಾಗಿಯಾಗಿದ್ದನು.
ಈತನ ಪತ್ತೆ ಬಗ್ಗೆ ವಿಶೇಷ ಕರ್ತವ್ಯದಲ್ಲಿ ತೆರಳಿದ್ದ ಕಾರ್ಕಳ-ಪಡುಬಿದ್ರೆ ಪೊಲೀಸರು, ಬೈಂದೂರಿನ ಯಡ್ತರೆ ಎಂಬಲ್ಲಿ ವಶಕ್ಕೆ ಪಡೆದು, ಪ್ರಕರಣದ ತನಿಖಾಧಿಕಾರಿ ಮುಂದೆ ಹಾಜರುಪಡಿಸಿದರು. ಆರೋಪಿ ಲೋಕೇಶ್ ತೇಜ ಕೊಠಾರಿಯನ್ನು ಆ.21ರಂದು ಬಂಧಿಸಿ, ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ಹಾಗೂ ಬೈಕಿನ ಇಂಜೀನ್ ನಂಬ್ರ ಹಾಗೂ ಚಾಸೀಸ್ ನಂಬ್ರವನ್ನು ಉಜ್ಜಲು ಬಳಸಿದ ಮಿಷಿನ್‌ನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ.




