ರಾಜ್ಯ ಅಥ್ಲೆಟಿಕ್ಸ್: ನಿಟ್ಟೆ ವಿದ್ಯಾಸಂಸ್ಥೆ ಕ್ರೀಡಾಪಟುಗಳ ಉತ್ತಮ ಸಾಧನೆ

ನಿಟ್ಟೆ, ಆ.22: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ ನಿಟ್ಟೆ ವಿದ್ಯಾಸಂಸ್ಥೆಗಳ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನದೊಂದಿಗೆ ವಿಶಿಷ್ಟ ಸಾಧನೆ ಮಾಡಿದರು.
ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಚಿರಾಗ್ ಪೂಜಾರಿ 200 ಮೀ. ಸ್ಪ್ರಿಂಟ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರೆ, 100 ಮೀ. ಓಟದಲ್ಲಿ ಬೆಳ್ಳಿ ಪದಕ ಪಡೆದರು. 20 ವರ್ಷದೊಳಗಿನವರ ವಿಭಾಗದಲ್ಲಿ ಸ್ಥುತಿ ಪಿ. ಶೆಟ್ಟಿ ಹೊಸ ದಾಖಲೆಯೊಂದಿಗೆ 100 ಮೀ ಮತ್ತು 200 ಮೀ ವಿಭಾಗದಲ್ಲಿ ಅವಳಿ ಚಿನ್ನದ ಪದಕ ಜಯಿಸಿದರು.
20 ವರ್ಷದೊಳಗಿನವರ ಹೈಜಂಪ್‌ನಲ್ಲಿ ಸಿನಾನ್ ಅಗ್ರಸ್ಥಾನದೊಂದಿಗೆ ಚಿನ್ನದ ಪದಕ ಗೆದ್ದುಕೊಂಡರು. ಡಾ.ಎನ್‌ಎಸ್‌ಎಎಂ ಪ್ರಥಮ ದರ್ಜೆ ಕಾಲೇಜಿನ ರಾಘವೇಂದ್ರ ಆರ್.ನಾಯಕ್ ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಪದಕ, ನಂದಿನಿ ಜಿ. ಅವರು 20ವರ್ಷದೊಳಗಿನವರ 3000 ಮೀ ಓಟದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರು.
ಸಮೃದ್ಧಿ ಅವರು 20ವರ್ಷದೊಳಗಿನವರ ವಿಭಾಗದ 1500 ಮೀ ಮತ್ತು 800 ಮೀ ಸ್ಪರ್ಧೆಗಳಲ್ಲಿ ಕಂಚಿನ ಪದಕ ಗೆದ್ದುಕೊಂಡರು. ಡಾ.ಎನ್‌ಎಸ್ ಎಎಂ ಪಿಯು ಕಾಲೇಜಿನ ರಶ್ಮಿತಾ ಗಣಪತಿ ದೇವಾಡಿಗ 18ವರ್ಷದೊಳಗಿನ ಬಾಲಕಿಯರ ಹೈಜಂಪ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆಯುವಲ್ಲಿ ಯಶಸ್ವಿಯಾದರು.
16 ವರ್ಷದೊಳಗಿನವರ ಬಾಲಕರ ವಿಭಾಗದ ಜಾವೆಲಿನ್ ಎಸೆತದಲ್ಲಿ ಡಾ.ಎನ್.ಎಸ್.ಎ.ಎಂ ಕನ್ನಡ ಮಾಧ್ಯಮ ಶಾಲೆಯ ಪ್ರಣಾಮ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದ್ದು, ಪದಕ ವಿಜೇತರನ್ನು ನಿಟ್ಟೆ ಸಂಸ್ಥೆಯ ಆಡಳಿತ ಮಂಡಳಿ ಅಭಿನಂದಿಸಿದೆ.






