ತನಿಖೆಗೆ ಸಿದ್ಧ ಎಂದು ಹೇಳದೆ, ತನಿಖೆಗೆ ಸಂಪೂರ್ಣ ಸಹಕರಿಸಿ: ಯಶ್ಪಾಲ್ಗೆ ನಾಗೇಂದ್ರ ಪುತ್ರನ್ ಸವಾಲು

ಯಶ್ಪಾಲ್ ಸುವರ್ಣ
ಉಡುಪಿ, ಆ.23: ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಅವ್ಯವಹಾರ ವಿಚಾರದಲ್ಲಿ ಆರೋಪ- ಪ್ರತ್ಯಾರೋಪ ಗಳಿಗಿಂತ ತನಿಖೆಯೇ ಮುಖ್ಯವಾಗುತ್ತದೆ. ಈ ಬಗ್ಗೆ ಎಸ್ಐಟಿ ತನಿಖೆ ಆಗಲಿ, ದಾಖಲೆಗಳು ಹೊರಬರಲಿ, ಸತ್ಯ ಏನೆಂಬುದು ಜನರಿಗೆ ತಿಳಿಯಬೇಕು. ಶಾಸಕರು ಕೇವಲ ನಾನು ತನಿಖೆಗೆ ಸಿದ್ಧ ಎಂದು ಹೇಳದೆ, ತನಿಖೆಗೆ ಸಂಪೂರ್ಣ ಸಹಕರಿಸಿ, ದಾಖಲೆಗಳನ್ನು ಪಾರದರ್ಶಕವಾಗಿ ಸಲ್ಲಿಸಬೇಕು ಎಂದು ಕಾಂಗ್ರೆಸ್ ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ತಿಳಿಸಿದ್ದಾರೆ.
ರಾಜಕೀಯದಲ್ಲಿ ಯಾರ ನೆರಳಿನಲ್ಲಿ ನಿಂತಿದ್ದೀರಿ ಎನ್ನುವುದಕ್ಕಿಂತ, ನಿಮ್ಮ ಅವಧಿಯಲ್ಲಿ ಏನು ಮಾಡಿ ತೋರಿಸಿದ್ದೀರಿ ಎನ್ನುವುದೇ ಮುಖ್ಯ. ಯಶ್ಪಾಲ್ ಸುವರ್ಣ ಹಿರಿಯ ರಾಜಕಾರಣಿ ವಿ.ಎಸ್.ಆಚಾರ್ಯ ರಂತಹ ನಾಯಕರನ್ನು ಗೌರವದಿಂದ ನೆನಪಿಸಿಕೊಳ್ಳುವುದರಲ್ಲಿ ತಪ್ಪಿಲ್ಲ. ಆದರೆ ಅವರ ಹೆಸರನ್ನು ಇಂದಿನ ಪ್ರಶ್ನೆಗಳಿಗೆ ಉತ್ತರವಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ. ಹಿಂದಿನ ನಾಯಕರ ಸಾಧನೆ ಅವರದ್ದು; ಇಂದಿನ ಜನಪ್ರತಿನಿಧಿ ಸಾಧನೆ ಅವರದೇ ಆಗಿರಬೇಕು ಎಂದು ಅವರು ಟೀಕಿಸಿದ್ದಾರೆ.
ಶಾಸಕರಾಗಿ ನಿಮ್ಮ ಅವಧಿಯಲ್ಲಿ ಉಡುಪಿಗೆ ತಂದ ಪ್ರಮುಖ ಅಭಿವೃದ್ಧಿ ಯೋಜನೆಗಳು ಯಾವುವು? ಎಷ್ಟು ಅನುದಾನ ಬಂದಿದೆ? ಎಷ್ಟು ಯೋಜನೆಗಳು ಪೂರ್ಣಗೊಂಡಿವೆ? ಜನರಿಗೆ ಅದರ ನೇರ ಪ್ರಯೋಜನವೇನು? ಈ ಪ್ರಶ್ನೆಗಳಿಗೆ ದಾಖಲೆಗಳೊಂದಿಗೆ ಉತ್ತರಿಸುವುದೇ ನಿಜವಾದ ನಾಯಕತ್ವ. ಕೇಂದ್ರದಲ್ಲಿ ನಿಮ್ಮದೇ ಸರ್ಕಾರವಿರು ವಾಗ, ನಿಮ್ಮದೇ ಸಂಸದರು ಇರುವಾಗ, ಉಡುಪಿ ಅಭಿವೃದ್ಧಿಗೆ ಕೇಂದ್ರದಿಂದ ಎಷ್ಟು ಅನುದಾನ ತಂದಿದ್ದೀರಿ? ನಿಮ್ಮ ಸಂಸದರ ಬಳಿ ಎಷ್ಟು ಬಾರಿ ಈ ಪ್ರಶ್ನೆಗಳನ್ನು ಕೇಳಿದ್ದೀರಿ? ಮೀನುಗಾರರು, ಸಹಕಾರಿ ಕ್ಷೇತ್ರ ಮತ್ತು ಉಡುಪಿ ಜನರಿಗಾಗಿ ಏನು ಸಾಧಿಸಿದ್ದೀರಿ? ಎಂದು ಅವರು ಶಾಸಕರನ್ನು ಪ್ರಶ್ನಿಸಿದ್ದಾರೆ.
ಹಿಂದೂ ಧರ್ಮದ ಬಗ್ಗೆ ಮಾತನಾಡುವವರು ಅದರ ಮೂಲ ಮೌಲ್ಯಗಳಾದ ಸತ್ಯ, ಧರ್ಮ, ಶಿಸ್ತು, ಸೇವೆ ಮತ್ತು ಆತ್ಮಸಂಯಮವನ್ನೂ ಜೀವನದಲ್ಲಿ ತೋರಿಸಬೇಕು. ಕೇವಲ ಕೇಸರಿ ಬಟ್ಟೆ ಧರಿಸುವುದು ಅಥವಾ ಘೋಷಣೆ ಕೂಗುವುದರಿಂದ ಧರ್ಮದ ಪ್ರತಿನಿಧಿತ್ವ ಆಗುವುದಿಲ್ಲ. ಇದು ಯಾರ ಮೇಲಿನ ದ್ವೇಷವಲ್ಲ. ಇದು ಜನಪ್ರತಿನಿಧಿ ಯನ್ನು ಪ್ರಶ್ನಿಸುವ ಪ್ರಜಾಪ್ರಭುತ್ವದ ಹಕ್ಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






