ಶಾಸಕರು, ಜನಪ್ರತಿನಿಧಿಗಳ ಹಿಂಬಾಲಕರಿಗೆ ಮಾತ್ರ ಸಾಲ: ದಲಿತ ಮಹಿಳೆಯರ ಆಕ್ರೋಶ
ಕೌಶಲಾಭಿವೃಧ್ಧಿ ಮಾಹಿತಿ ಕಾರ್ಯಾಗಾರ

ಉಡುಪಿ, ಆ.24: ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿ ವತಿಯಿಂದ ಉಡುಪಿ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗಾಗಿ ಒಂದು ದಿನದ ಕೌಶಲಾಭಿವೃಧ್ಧಿ ಮತ್ತು ಮಾಹಿತಿ ಕಾರ್ಯಾಗಾರವನ್ನು ಸೋಮವಾರ ಆದಿಉಡುಪಿಯ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿತ್ತು.
ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ಶಂಕರ್ ಮಲ್ಲಾರ್ ಮಾಹಿತಿ ನೀಡುತ್ತ ಹಲವು ಯೋಜನೆಗಳ ಬಗ್ಗೆ ವಿವರಿಸಿದರು ಉಡುಪಿ ಜಿಲ್ಲೆಗೆ ಕೇವಲ 79 ಲಕ್ಷ ರೂ. ಯೋಜನೆಗಳು ಬಂದಿದ್ದು ಅದನ್ನು ಯಾವ ರೀತಿ ಹಂಚಿಕೆ ಮಾಡುವುದು ಎಂಬುದು ಗೊತ್ತಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತ ಪಡಿಸಿದರು.
ಈ ವೇಳೆ ಇದಕ್ಕೆ ಪ್ರತಿಕ್ರಿಯಿಸಿದ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು, ಆದರೆ ನಮ್ಮ ವರು ಎಷ್ಟು ಸಲ ಅರ್ಜಿ ಹಾಕಿದರೂ ಸಾಲ ಸಿಗುತ್ತಿಲ್ಲ. ಒಂದೋ ಇಲಾಖಾ ಕಚೇರಿಯಲ್ಲಿ ತಿರಸ್ಕರಿಸಲಾಗುತ್ತದೆ, ಇಲ್ಲದಿದ್ರೆ ಬ್ಯಾಂಕ್‌ನಲ್ಲಿ ತಿರಸ್ಕರಿಸಲಾಗುತ್ತದೆ ಎಂದರು.
ಇದಕ್ಕೆ ಧ್ವನಿಗೂಡಿಸಿದ ದಲಿತ ಮಹಿಳೆಯರು, ಅಧಿಕಾರಿಯನ್ನುದ್ದೇಶಿಸಿ ಮಾತನಾಡಿ, ನೀವು ಕೇವಲ ಶಾಸಕರು, ಜನಪ್ರತಿನಿದಿನಗಳ ಚೇಲಾಗಳಿಗಷ್ಟೇ ಸಾಲ ನೀಡುತ್ತೀರಿ. ಕೊಟ್ಟ ಮನೆಯವರಿಗೆಯೇ ಮತ್ತೆ ಮತ್ತೆ ಸಾಲ ಕೊಡು ತ್ತೀರೀ ಎಂದು ಅಕ್ರೋಶ ವ್ಯಕ್ತಪಡಿಸಿದರು. ಇದರಿಂದ ಇಡೀ ಸಭೆಯಲ್ಲಿ ಗದ್ದಲ ಉಂಟಾಯಿತು.
ಕಾರ್ಯಾಗಾರ ಉದ್ಘಾಟನೆ: ಉಡುಪಿ ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಹಿಳೆಯರು ಧನಾತ್ಮಕ ಮನೋಭಾವನೆ ಬೆಳೆಸಿಕೊಳ್ಳಬೇಕು. ಅವರಲ್ಲಿ ಮನೋಬಲ ಇದ್ದರೆ ಎಲ್ಲವೂ ಸಾಧ್ಯವಾ ಗುತ್ತದೆ. ಅದು ಬಿಟ್ಟು ಋಣಾತ್ಮಕ ಮನೋಭಾವನೆ ಬೆಳೆಸಿಕೊಂಡು ಎಲ್ಲವೂ ಅಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಬ್ರಹ್ಮಾವರ ರುಡ್‌ಸೆಟ್ ಕೇಂದ್ರದ ಮುಖ್ಯ ಪ್ರಬಂಧಕ ಡಾ.ಎಂ. ಬೊಮ್ಮಯ್ಯ ಮಾತನಾಡಿ, ಮಹಿಳೆಯರು ಸ್ವಾವಲಂಬಿಗಳಾಗ ಬೇಕು. ಅಂಬೇಡ್ಕರ್‌ರವರು ಮಹಿಳೆಯವರಿಗೋಸ್ಕರವೇ ಸಂವಿಧಾನ ಬರೆದರು. ಇಡೀ ದೇಶದ ಎಲ್ಲಾ ಜಾತಿ, ಧರ್ಮದ ಮಹಿಳೆಯರಿಗೋಸ್ಕರ ಸಂವಿಧಾನ ಬರೆದರು ಎಂದು ತಿಳಿಸಿದರು.
ಸ್ವ ಉದ್ಯೋಗದ ನೇರ ಪ್ರಾತಕ್ಷಿಕೆ ನಡೆಸಿಕೊಟ್ಟ ಪ್ರಮೀಳ ಬಾರ್ಕೂರು, ಸ್ಥಳದಲ್ಲೇ ಸಾಬೂನು ತಯಾರಿಸಿ ಮಹಿಳೆಯರಿಗೆ ಮಾಹಿತಿ ನೀಡಿದರು. ಸುಂದರ ಗುಜ್ಜರ್‌ಬೆಟ್ಟು ಮುಖ್ಯ ಅತಿಥಿಯಾಗಿ ಮಾತನಾಡಿದರು. ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಸಂಚಾಲಕರಾದ ಮಂಜುನಾಥ ಗಿಳಿಯಾರು ಪ್ರಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ಸಂಘಟನೆ ಮಹತ್ವ ವಿವರಿಸಿದರು. ರಾಜ್ಯ ಸಂಘಟನಾ ಸಂಚಾಲಕಿ ವಸಂತಿ ಶಿವಾನಂದ್ ವಂದಿಸಿದರು.






