ಕುಂದಾಪುರ: ರಾಷ್ಟ್ರೀಯ ಹೆದ್ದಾರಿಗೆ ರಕ್ಷಣಾ ಬೇಲಿ ಅಳವಡಿಕೆ

ಕುಂದಾಪುರ, ಆ.25: ಉಡುಪಿ-ಕುಂದಾಪುರ ರಾಷ್ಟ್ರೀಯ ಹೆದ್ದಾರಿಯ ವಿನಾಯಕ ಚಿತ್ರಮಂದಿರ ಎದುರಿನ ಎರಡೂ ಕಡೆ ಸುಮಾರು 60 ಮೀಟರ್ ನಷ್ಟು ದೂರದವರೆಗೆ ರಕ್ಷಣಾ ತಡೆಬೇಲಿ ಅಳವಡಿಸುವ ಕಾರ್ಯ ನಡೆಯುತ್ತಿದೆ.
ಕಳೆದ ಕೆಲ ವರ್ಷಗಳಿಂದ ಇಲ್ಲಿ 20ಕ್ಕೂ ಮಿಕ್ಕಿ ಅವಘಡಗಳು ಸಂಭವಿಸಿದ್ದು, 5ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ. ಇಲ್ಲಿ ಏಕಾಏಕಿ ಪಾದಚಾರಿ ಗಳು ಹೆದ್ದಾರಿ ದಾಟದಂತೆ ಸೂಕ್ತವಾದ ತಡೆಬೇಲಿ ಅಳವಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದರು.
ಇಲ್ಲಿನ ಕುಂದಾಪುರ ಕಡೆಗೆ ಹಾಗೂ ಉಡುಪಿ ಕಡೆಗೆ ತೆರಳುವ ಎರಡೂ ಬದಿಯ ಹೆದ್ದಾರಿಯ ಸುಮಾರು 60 ಮೀ. ನಷ್ಟು ದೂರದವರೆಗೆ ತಡೆಬೇಲಿ ಇಲ್ಲದೇ ಇರುವುದರಿಂದ ಇಲ್ಲಿ ಜನರು ಏಕಾಏಕಿ ಹೆದ್ದಾರಿ ದಾಟುತ್ತಾರೆ. ಇಲ್ಲಿ ಸರಿ ಯಾದ ಬೆಳಕಿನ ವ್ಯವಸ್ಥೆಯೂ ಇಲ್ಲದೇ ಇರುವುದರಿಂದ ಹೆದ್ದಾರಿಯಲ್ಲಿ ವೇಗವಾಗಿ ಸಂಚರಿಸುವ ವಾಹನಗಳಿಗೆ ಜನ ಹೆದ್ದಾರಿ ದಾಟುವುದು ತಿಳಿಯದೇ ಅಪಘಾತಗಳು ಆಗುತ್ತಿತ್ತು. ಅದಕ್ಕಾಗಿ ಇಲ್ಲಿ ಬಾಕಿ ಇರುವ 60 ಮೀ. ನಷ್ಟು ದೂರ ತಡೆಬೇಲಿ ಅಳವಡಿಸಿದರೆ ಏಕಾಏಕಿ ಹೆದ್ದಾರಿ ದಾಟುವುದು ತಪ್ಪುತ್ತದೆ. ಅಪಘಾತಗಳಿಗೂ ಕಡಿವಾಣ ಹಾಕಿದಂತಾಗು ತ್ತದೆ ಎನ್ನುವುದಾಗಿ ಸಾರ್ವಜನಿಕರು, ವಾಹನ ಸವಾರರು ಒತ್ತಾಯಿಸುತ್ತಿದ್ದರು.
ವಿನಾಯಕ ಚಿತ್ರ ಮಂದಿರ ಬಳಿಯ ಹೆದ್ದಾರಿಯನ್ನು ಏಕಾಏಕಿ ದಾಟದಿರಲು ಅಗತ್ಯ ರಕ್ಷಣಾ ತಡೆಬೇಲಿ ಅಳವಡಿಸುವ ಕುರಿತು ’ವಾರ್ತಾಭಾರತಿ’ ಈ ಹಿಂದೆ ವರದಿ ಪ್ರಕಟಿಸಿ ಗಮನಸೆಳೆದಿತ್ತು.




