ಭ್ರಷ್ಟ ಕಾಂಗ್ರೆಸ್ ಸರಕಾರಕ್ಕೆ ಜನರಿಂದಲೇ ಸೂಕ್ತ ಪ್ರತ್ಯುತ್ತರ: ಪ್ರೊ.ಎಂ.ನಾಗರಾಜ್

ಉಡುಪಿ, ಆ.25: ರಾಜ್ಯ ಸಚಿವ ಬಿ.ನಾಗೇಂದ್ರ ಭ್ರಷ್ಟಾಚಾರ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದು, ಸರಕಾರದ ಹಣವನ್ನು ಬೇರೆಡೆಗೆ ವರ್ಗಾ ಯಿಸಿರುವ ಆರೋಪಗಳಿವೆ. ಆದರೂ ಕಾಂಗ್ರೆಸ್ ಸೂಕ್ತ ಕ್ರಮಕೈಗೊಳ್ಳದೆ ಮೃಧು ಧೋರಣೆ ತಳೆಯುತ್ತಿದೆ. ಈ ಬಗ್ಗೆ ಬಿಜೆಪಿ ವಿಧಾನಸೌಧ ಹಾಗೂ ವಿಧಾನ ಪರಿಷತ್ ಒಳಗಡೆ ಮಾತ್ರವಲ್ಲದೆ, ಮುಂದೆ ಬೀದಿಗಿಳಿದು ಹೋರಾಟ ನಡೆಸಲಿದೆ. ಈ ಭ್ರಷ್ಟ ಸರಕಾರಕ್ಕೆ ಜನರೇ ಸೂಕ್ತ ಪ್ರತ್ಯುತ್ತರ ನೀಡಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಪ್ರೊ. ಎಂ. ನಾಗರಾಜ್ ತಿಳಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ವಿಪಕ್ಷಗಳ ವರ್ತನೆ ಅತ್ಯಂತ ಖಂಡನೀಯವಾಗಿದೆ. ಲೋಕಸಭೆಯಲ್ಲಿ ಕೇವಲ ಶೇ.19 ಹಾಗೂ ರಾಜ್ಯಸಭೆಯಲ್ಲಿ ಶೇ.29ರಷ್ಟು ಮಾತ್ರ ಕಲಾಪ ನಡೆದಿವೆ. ವಂದೇ ಮಾತರಂ ಗೀತೆಗೆ ಕಾಂಗ್ರೆಸ್ ಅಗೌರವ ತೋರುತ್ತಿರುವ ಬಗ್ಗೆ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಪದಾಕಾರಿಗಳ ಸಭೆಯಲಿ ಖಂಡನಾ ನಿರ್ಣಯ ಅಂಗೀಕರಿಸಲಾಗಿದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕ ಸೇವೆಯಲ್ಲಿ 13 ವರ್ಷ ಮುಖ್ಯಮಂತ್ರಿಯಾಗಿ ಹಾಗೂ 12 ವರ್ಷ ಪ್ರಧಾನಿಯಾಗಿ 25 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಸೆ.17ರಿಂದ ಅ.17 ರವರೆಗೆ ದೇಶಾದ್ಯಂತ ಸೇವಾ ಸಂಕಲ್ಪ ದಿನ ಆಚರಿಸಲು ಬಿಜೆಪಿ ತೀರ್ಮಾನಿಸಿದೆ ಎಂದರು.
ಮೋದಿಯವರ 25 ವರ್ಷ ಕಳಂಕರಹಿತ ಆಡಳಿತದ ಸಾಧನೆಯನ್ನು ಸಾರ್ವಜನಿಕರಿಗೆ ತಲುಪಿಸಲು ದೇಶಾದ್ಯಂತ 5-6 ಪ್ರಮುಖ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಜೊತೆಗೆ ಅಂಗನವಾಡಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಾತೃಶಕ್ತಿಯನ್ನು ಗೌರವಿಸುವುದು, ಪಂಜಿನ ಮೆರವಣಿಗೆ, ಶೈಕ್ಷಣಿಕ--ಸಾಮಾಜಿಕ ಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದರು.
ಕೇಂದ್ರ ಸಂಪುಟದ ಎಲ್ಲಾ ಸಚಿವರು ಹಾಗೂ ಪಕ್ಷದ ಪದಾಧಿಕಾರಿಗಳು ದೇಶದ ವಿವಿಧ ವಿಶ್ವವಿದ್ಯಾಲಯಗಳಿಗೆ ತೆರಳಿ ಯುವಕರೊಂದಿಗೆ ನೇರ ಸಂವಾದ ನಡೆಸಲಿದ್ದಾರೆ. ಕೇಂದ್ರ ಸಚಿವರು ಮತ್ತು ಬಿಜೆಪಿ ಪದಾಧಿಕಾರಿಗಳು 1,000ಕ್ಕೂ ಹೆಚ್ಚು ಸ್ಥಳಗಳಲ್ಲಿ ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಮಾಜಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಸುರೇಶ್ ನಾಯಕ್, ಜಿಲ್ಲಾ ವಕ್ತಾರ ಮಧುಕರ ಮುದ್ರಾಡಿ, ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ, ಜಿಲ್ಲಾ ಖಜಾಂಚಿ ಪ್ರವೀಣ್ ಕುವಾರ್ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ, ದಿನಕರ ಶೆಟ್ಟಿ ಹೆರ್ಗ ಉಪಸ್ಥಿತರಿದ್ದರು.






